ಮಡಿಕೇರಿ, ನ. 13: ದೇಶದೆಲ್ಲೆಡೆ ತಾ. 14 ರಂದು (ಇಂದು) ಮಕ್ಕಳ ದಿನಾಚರಣೆ ಪ್ರಯುಕ್ತ; ಭಾರತೀಯ ವಿದ್ಯಾಭವನ ಶಾಲೆಗಳ ಮಕ್ಕಳಿಗೆ ಖಾದಿ ವಸ್ತ್ರ ಧರಿಸುವ ಮೂಲಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಡಳಿತ ಮಂಡಳಿಯು ವ್ಯವಸ್ಥೆ ರೂಪಿಸಿದೆ. ಅದೇ ರೀತಿ ಇಲ್ಲಿನ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಮಕ್ಕಳು ಸಾಮೂಹಿಕ ವಾಗಿ ಖಾದಿ ಬಟ್ಟೆಯ ಸಮವಸ್ತ್ರ ಧರಿಸಲಿದ್ದಾರೆ.ಭಾರತದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ ಅವರು; ಅಂದು ಖಾದಿ ವಸ್ತ್ರವನ್ನು ಸ್ವತಃ ಚರಕದಿಂದ ನೇಯುವದರೊಂದಿಗೆ ರೂಪಿಸಿದ; ಸ್ವದೇಶಿ ಆಂದೋಲನವು ಆ ಚಳುವಳಿಯ ದಿಕ್ಕನ್ನೇ ಬದಲಾ ಯಿಸಿದ್ದು; ಈಗ ಇತಿಹಾಸ. ಪ್ರಸಕ್ತ ಗಾಂಧೀಜಿ ಅವರ 150ನೇ ವರ್ಷಾಚರಣೆ ಪ್ರಯುಕ್ತ; ಭಾರತದ ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು; ಶಾಲಾ - ಕಾಲೇಜುಗಳಲ್ಲಿ ಮಕ್ಕಳಿಗೆ ಅಹಿಂಸೆಯ ಪ್ರತಿಪಾದಕರಾಗಿದ್ದ ಮಹಾತ್ಮ ಗಾಂಧೀಜಿಯವರ ಸ್ವದೇಶೀ ವಿಚಾರಧಾರೆಗಳಿಗೆ ಒತ್ತು ನೀಡುವಂತೆ ಕರೆ ನೀಡಿದ್ದಾರೆ.

ವಿದ್ಯಾಲಯ ಸಂಕಲ್ಪ : ಈ ದಿಸೆಯಲ್ಲಿ ದೇಶದೆಲ್ಲೆಡೆ ಭಾರತೀಯ ವಿದ್ಯಾಭವನ ಶಾಲೆಗಳಲ್ಲಿ ಮಕ್ಕಳಿಗೆ ಖಾದಿಯನ್ನು ಪರಿಚಯಿಸಲಾಗುತ್ತಿದೆ. ಅಂತೆಯೇ

(ಮೊದಲ ಪುಟದಿಂದ) ಮಡಿಕೇರಿ ಶಾಖೆಯ ಮಕ್ಕಳಿಗೆ ತಾ. 14 ರಂದು (ಇಂದು) ಖಾದಿ ವಸ್ತ್ರಧರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂಬಂಧ ಇಲ್ಲಿನ ವಿದ್ಯಾಲಯದ 800ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಗೆ ಖಾದಿವಸ್ತ್ರ ಧರಿಸಿಕೊಂಡು ಬರುವಂತೆ; ಆಡಳಿತ ಮಂಡಳಿಯು ವಿನೂತನ ಪ್ರಯೋಗ ನಡೆಸಿದೆ. ಸುಮಾರು 2 ಸಾವಿರ ಮೀಟರ್ ಶುದ್ಧ ಖಾದಿ ವಸ್ತ್ರವನ್ನು ಶಾಲಾ ಮುಖ್ಯಸ್ಥರೇ ಖರೀದಿಸಿದ್ದಾರೆ.

ಸಂತ್ರಸ್ತ ಮಹಿಳೆಯರ ಕೊಡುಗೆ : ಈ ಖಾದಿ ವಸ್ತ್ರಗಳನ್ನು ವಿದ್ಯಾಲಯದ ಮಕ್ಕಳಿಗೆ; ಕಾಲೂರುವಿನಲ್ಲಿ ನಡೆಯುತ್ತಿರುವ ಸಂತ್ರಸ್ತ ಮಹಿಳೆಯರ ಹೊಲಿಗೆ ಕೇಂದ್ರದಲ್ಲಿ ಸಿದ್ಧಗೊಳಿಸಲಾಗಿದೆ. ಆ ಮುಖಾಂತರ ಅಲ್ಲಿನ ಮಹಿಳೆಯರು ಮಕ್ಕಳಿಗೆ ಜುಬ್ಬ ಮತ್ತು ಪೈಜಾಮ ಹೊಲಿದುಕೊಟ್ಟಿದ್ದಾರೆ.

ರೂ. 3 ಲಕ್ಷ ವೆಚ್ಚ : ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಕಲಿಯುತ್ತಿರುವ; ಒಂದನೇ ತರಗತಿಯಿಂದ 10ನೇ ತರಗತಿವರೆಗಿನ 850 ಮಕ್ಕಳಿಗೆ; ಈ ಖಾದಿ ವಸ್ತ್ರಕ್ಕಾಗಿ ಅಂದಾಜು ರೂ. 3 ಲಕ್ಷವನ್ನು ಆಡಳಿತ ಮಂಡಳಿ ಭರಿಸಿದೆ ಎಂದು ಗೊತ್ತಾಗಿದೆ. ಕಾಲೂರಿನ 15 ಮಂದಿ ಮಹಿಳೆಯರು ಒಂದು ವರ್ಷದಿಂದ ಹೊಲಿಗೆ ತರಬೇತಿ ಪಡೆದು; ಪ್ರಸ್ತುತ ದಿನಗಳಲ್ಲಿ ಕಳೆದ 22 ದಿನಗಳಲ್ಲಿ ಎಲ್ಲಾ ಮಕ್ಕಳಿಗೆ ಈ ವಿನೂತನ ಸಮವಸ್ತ್ರದ ಹೊಲಿಗೆ ಕೆಲಸ ಪೂರೈಸಿ ಶಾಲೆಗೆ ಒದಗಿಸಿದ್ದಾರೆ. ಈ ಖಾದಿ ವಸ್ತ್ರವನ್ನು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮಕ್ಕಳು ಈ ದಿನದ ಮಕ್ಕಳ ದಿನಾಚರಣೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಧರಿಸಿಕೊಂಡು ಶಾಲೆಗೆ ಬರುವಂತೆ ಸಲಹೆ ನೀಡಲಾಗಿದೆ.

ಆ ಮುಖಾಂತರ ಮಕ್ಕಳಲ್ಲಿ ಸ್ವದೇಶೀ ವಿಚಾರಧಾರೆಯೊಂದಿಗೆ; ಖಾದಿ ವಸ್ತ್ರದ ಮಹತ್ವ ಕುರಿತು ಅರಿವು ಮೂಡಿಸಲಾಗುವದು; ಸಮಾಜದಲ್ಲಿ ಸರ್ವ ಸಾಮಾನ್ಯರು ಕೂಡ ಖಾದಿಯನ್ನು ಧರಿಸುವಂತೆ ಮಕ್ಕಳ ಪೋಷಕರು ಸಮಾಜದಲ್ಲಿ ಜಾಗೃತಿ ಮೂಡಿಸಲು ಈ ಪ್ರಯತ್ನವೆಂದು ವಿದ್ಯಾಸಂಸ್ಥೆ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.