ಕೂಡಿಗೆ, ನ. 13: ಮುಳ್ಳುಸೋಗೆ ಗ್ರಾ.ಪಂ.ಯಲ್ಲಿ ವಿಶೇಷ ಗ್ರಾಮಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಭವ್ಯ ವಹಿಸಿದ್ದರು.
ಮಿಷನ್ ಅಂತ್ಯೋದಯ ನಮೂನೆಗಳ ಅನುಮೋದನೆ ನೀಡುವ ಬಗ್ಗೆ ಚರ್ಚೆ ನಡೆಯಿತು. ನಮ್ಮ ಗ್ರಾಮ ನಮ್ಮ ಯೋಜನೆಯ ವಾಸ್ತವ ಸ್ಥಿತಿ ವಿಶ್ಲೇಷಣೆ ಹಾಗೂ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳ ಹಿಂದಿನ ಸಾಲಿನ ಪ್ರಗತಿಯ ವಿವರ ಮತ್ತು 2020-21ನೇ ಸಾಲಿನ ಎಲ್ಲಾ ಕಾರ್ಯಕ್ರಮಗಳ ಕರಡು ಯೋಜನೆಯನ್ನು ಸಿದ್ಧಪಡಿಸುವದರ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತನಾಡಿ, ಕೇಂದ್ರ ಸರ್ಕಾರದ ಪ್ರಮುಖದ ಅಭಿಯಾನಗಳಾದ ಫಿಟ್ ಇಂಡಿಯಾ ಅಭಿಯಾನ ಕಾರ್ಯಕ್ರಮವನ್ನು ಪ್ರಾರಂಭಿಸುವ ಬಗ್ಗೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಪೋಶನ್ ಮಹಾ (ಪೌಷ್ಟಿಕ ಆಹಾರದ ಮಹತ್ವ)ಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ನೋಡಲ್ ಅಧಿಕಾರಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್, ಗ್ರಾ.ಪಂ. ಉಪಾಧ್ಯಕ್ಷ ತಾರಾನಾಥ್ ಸೇರಿದಂತೆ ಸದಸ್ಯರು ಇದ್ದರು.