ಮಡಿಕೇರಿ, ನ. 12: ರಾಷ್ಟ್ರದ ಅನೇಕ ಸರಕಾರಿ ಶಾಲೆಗಳಲ್ಲಿ ಇಂದು ಸೌಕರ್ಯಗಳಿಗಿಂತ ಕೊರತೆಗಳೇ ಹೆಚ್ಚಾಗಿರುವದು ವಾಸ್ತವ. ಆದರೆ ಮುಳ್ಳೂರು ಸರಕಾರಿ ಶಾಲೆಯ ಸೌಕರ್ಯಗಳು ಮುಖ್ಯವಾಗಿ ಶೌಚಾಲಯದ ವ್ಯವಸ್ಥೆಯು ವಿಭಿನ್ನವಾಗಿದೆ.
ಈಗಿನ ಕಾಲದ ಶಿಕ್ಷಣದ ವ್ಯವಸ್ಥೆಯು ಪಠ್ಯಪುಸ್ತಕದಲ್ಲಿನ ಮಾಹಿತಿಯನ್ನು ಸಂಗ್ರಹಿಸಿ ಪರೀಕ್ಷೆಯಲ್ಲಿ ಅದನ್ನು ಗೀಚಿ ಬರೆದು ಅಧಿಕ ಅಂಕಗಳನ್ನು ಪಡೆಯಲು ಪ್ರೋತ್ಸಾಹಿಸಿದರೆ ಈ ಶಾಲೆಯ ಶಿಕ್ಷಕ ಸತೀಶ್ ಸಿ.ಎಸ್. ‘ಆರೋಗ್ಯ ಮತ್ತು ನೈರ್ಮಲ್ಯ’ ಪಾಠಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ಆರೋಗ್ಯ ಹಾಗೂ ನೈರ್ಮಲ್ಯ ಕಾಪಾಡಲು ಮೂಲಭೂತ ಸೌಕರ್ಯವಾಗಿರುವ ಶೌಚಾಲಯದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಂದಲೇ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸ್ತುತ ಶಾಲೆಯಲ್ಲಿ ಶೌಚಾಲಯವಿದ್ದರೂ ವ್ಯವಸ್ಥಿತವಾದ ವಿಲೇವಾರಿ ಇರಲಿಲ್ಲ. ಗಂಡು ಮಕ್ಕಳ ಶೌಚಾಲಯದಲ್ಲಿ ಯೂರಿನಲ್ಸ್‍ಗಳಿಲ್ಲದೆ ಇದ್ದುದ್ದರಿಂದ ಮೂತ್ರ ಎಲ್ಲೆಡೆ ಹರಡಿ ವಾಸನೆಯ ಜೊತೆಗೆ ರೋಗಾಣುಗಳು ಹರಡಿ ಆರೋಗ್ಯದ ಮೇಲೆ ದುಷ್ಪರಿಣಾಮ ಗಳು ಉಂಟು ಮಾಡುವ ಸಾಧ್ಯತೆ ಹೆಚ್ಚಿತ್ತು. ಯೂರಿನಲ್‍ಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಅಳವಡಿಸಲು ಆರ್ಥಿಕವಾಗಿ ಅಧಿಕ ವೆಚ್ಚವಾಗುವ ಕಾರಣ ಇಲ್ಲಿಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿರುಪಯುಕ್ತ ಮತ್ತು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಕ್ಯಾನ್‍ಗಳನ್ನು ಬಳಸಿ ಯೂರಿನಲ್ ಮಾದರಿಯಲ್ಲಿ ಅವನ್ನು ಕತ್ತರಿಸಿ ಅವಕ್ಕೆ ಪಿ.ವಿ.ಸಿ. ಪೈಪ್ ಅಳವಡಿಸಿ ವ್ಯವಸ್ಥಿತವಾಗಿ ವಿಲೇವಾರಿ ಮಾಡಿದ್ದಾರಲ್ಲದೆ ಇದಕ್ಕೆ ಫಿನಾಯಿಲ್ ಕೂಡ ಹಾಕಲು ವ್ಯವಸ್ಥೆ ಮಾಡಿ ಸ್ವಚ್ಛ ಭಾರತ ಅಭಿಯಾನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಕೀಟನಾಶಕ ಮತ್ತು ಅಡುಗೆ ಎಣ್ಣೆಯ ಐದು ಲೀಟರಿನ ಸಿಲಿಂಡರ್ ಆಕೃತಿಯ ಕ್ಯಾನುಗಳನ್ನು ತೆಗೆದುಕೊಂಡು ತಳಭಾಗವನ್ನು ಮೇಲ್ಮುಖವಾಗಿ ಮಾಡಿಕೊಂಡು ಯೂರಿನಲ್ ಮಾದರಿಯಲ್ಲಿ ಕತ್ತರಿಸಿ ಮೇಲ್ಭಾಗದಲ್ಲಿ ನೀರು ಮತ್ತು ಫಿನೈಲ್ ಸಾಗಿಸಲು ಹಾಗೂ ತಳಭಾಗದಲ್ಲಿ ಯೂರಿನ್ ವಿಲೇವಾರಿಯಾಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಹತ್ತು ಲೀಟರ್ ಸಾಮಥ್ರ್ಯದ ನೀರಿನ ಕ್ಯಾನ್ ಒಂದನ್ನು ಯೂರಿನಲ್ ಶುಚಿಗೊಳಿಸಲು ಅಳವಡಿಸಲಾಗಿದ್ದು, ಗೇಟ್‍ವಾಲ್ ಸಿಕ್ಕಿಸಲಾಗಿದೆ.
ಪ್ರತಿನಿತ್ಯ ತೊಳೆಯುವ ಕೆಲಸ ಇದರಿಂದ ತಪ್ಪುತ್ತದೆ. ಅಲ್ಲದೆ ಇಲ್ಲಿ ವಿಶೇಷವಾಗಿ ಐದು ಲೀಟರ್ ಕ್ಯಾನೊಂದನ್ನು ಫಿನಾಯಿಲ್ ತುಂಬಲು ಬಳಸಲಾಗಿದ್ದು, ವಿದ್ಯಾರ್ಥಿ ಗಳು ಪ್ರತಿನಿತ್ಯ ನೀರಿನೊಂದಿಗೆ ಫಿನಾಯಿಲ್ ಮಿಕ್ಸ್ ಮಾಡಿ ಇದಕ್ಕೆ ಹಾಕುತ್ತಾರೆ. ಇದು ನಿಧಾನವಾಗಿ ಹನಿಹನಿಯಾಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸ್ಥಳೀಯ ನಿಡ್ತ ಪಂಚಾಯತ್ ಮತ್ತು ಆಲೂರು ಆರೋಗ್ಯ ಉಪ ಕೇಂದ್ರದ ವೈದ್ಯಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಶಾಲೆಗೆ ಸಹಕಾರ ನೀಡುವದಾಗಿ ಭರವಸೆ ನೀಡಿದ್ದಾರೆ.
ಈ ಶಾಲೆಯಲ್ಲಿ ಶೌಚಾಲಯ ಮಾತ್ರವಲ್ಲದೆ, ಪರಿಸರದ ಬಗ್ಗೆಯೂ ಇವರು ಕಾಳಜಿ ಹೊಂದಿದ್ದಾರೆ. ಪ್ರಕೃತಿ ಸ್ನೇಹಿ ಸೋಲಾರ್ ಪ್ಯಾನಲ್, ಗೊಬ್ಬರದ ಘಟಕ ಹಾಗೂ ಬಯೋ ಗಾರ್ಡನ್ ಅನ್ನು ನಿರ್ಮಿಸಿ ಪರಿಸರದ ಬಗ್ಗೆ ಪ್ರಾಯೋಗಿಕ ವಾಗಿಯೇ ಮಕ್ಕಳಲ್ಲಿ ಜ್ಞಾನ ತುಂಬುತ್ತಿದ್ದಾರೆ.