ಸೋಮವಾರಪೇಟೆ, ನ. 12: ಇಲ್ಲಿನ ತಾಲೂಕು ಕಚೇರಿಯಲ್ಲಿ ಪ್ರಿಂಟರ್‍ನ ಕೊರತೆಯಿಂದ ಪಹಣಿ ಪತ್ರ ವಿತರಣೆ ಸ್ಥಗಿತಗೊಂಡಿದ್ದು, ಹೆಚ್ಚುವರಿ ಪ್ರಿಂಟರ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಲೂಕು ಕಚೇರಿಗೆ ಪಹಣಿ ಸೇರಿದಂತೆ ಇನ್ನಿತರ ದಾಖಲೆಗಳಿಗಾಗಿ ದಿನಂಪ್ರತಿ ಗ್ರಾಮೀಣ ಭಾಗದಿಂದ ನೂರಾರು ಮಂದಿ ಆಗಮಿಸುತ್ತಿದ್ದು, ಕಚೇರಿ ಸಿಬ್ಬಂದಿಗಳು ಪ್ರಿಂಟರ್ ಸರಿಯಿಲ್ಲ ಎಂದು ಫಲಕ ಅಳವಡಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿ ದ್ದಾರೆ ಎಂದು ಕಚೇರಿಗೆ ಆಗಮಿಸಿ ಬರಿಗೈಯಲ್ಲಿ ವಾಪಸ್ಸಾದ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನಿಷ್ಟ ಹೆಚ್ಚುವರಿ ಪ್ರಿಂಟರ್ ಖರೀದಿಸಲೂ ಸಹ ತಾಲೂಕು ಕಚೇರಿಯಲ್ಲಿ ಹಣವಿಲ್ಲವೇ? ಎಂದು ಹಲವಷ್ಟು ಮಂದಿ ಪ್ರಶ್ನಿಸುತ್ತಿದ್ದು, ಇನ್ನಾದರೂ ತಹಶೀಲ್ದಾರ್‍ರವರು ತಕ್ಷಣ ಹೆಚ್ಚುವರಿ ಪ್ರಿಂಟರ್ ಖರೀದಿಸಲು ಮುಂದಾಗ ಬೇಕೆಂದು ಒತ್ತಾಯಿಸಿದ್ದಾರೆ.