ಮಡಿಕೇರಿ, ನ. 12: ಬ್ಯಾಂಕ್‍ನಿಂದ ಪಡೆದಿದ್ದ ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಡಗದಾಳು ಗ್ರಾಮದ ಅಜ್ಜಿರಂಡ ಸಾಬಗಣಪತಿ ಯನ್ನು ಇಂದು ಬಂಧಿಸಿರುವ ಪೊಲೀಸರು 15 ದಿನಗಳ ಕಾಲ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.

ಕಡಗದಾಳು ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ಲೋಕೇಶ್ (45) ಕತ್ತಿಯಿಂದ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಬ್ಯಾಂಕ್‍ನಿಂದ ಸಾಲ ಪಡೆದಿದ್ದ ಅದೇ ಗ್ರಾಮದ ಅಜ್ಜಿರಂಡ ಸಾಬ ಗಣಪತಿ ಎಂಬಾತ ವ್ಯವಸ್ಥಾಪಕ ಲೋಕೇಶ್ ಮೇಲೆ ಹಲ್ಲೆ ನಡೆಸಿದ್ದು; ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲವು ತಿಂಗಳುಗಳ ಹಿಂದೆ ರೂ. 10 ಸಾವಿರ ಹಣವನ್ನು ಸಾಬ ಗಣಪತಿ ಸಾಲವನ್ನಾಗಿ ಪಡೆದುಕೊಂಡಿದ್ದ ಬಡ್ಡಿ ಸಹಿತ ಅಂದಾಜು ರೂ. 2,500 ಹಣ ಬಾಕಿ ಉಳಿಸಿಕೊಂಡಿದ್ದ ಎಂದು ಹೇಳಲಾಗುತ್ತಿದ್ದು; ಈ ಬಗ್ಗೆ ಆರೋಪಿ ಗಣಪತಿ ಹಾಗೂ ಸಾಲಕ್ಕೆ ಜಾಮೀನು ನೀಡಿದ್ದ ವ್ಯಕ್ತಿಗೆ ನೋಟೀಸ್ ಕೂಡ ನೀಡಲಾಗಿತ್ತು.

ಸಾಲದ ವಿಷಯದ ಬಗ್ಗೆ ವಿಚಾರಿಸಲು ಸಂಜೆ ಸುಮಾರು 4.30ರ ವೇಳೆಗೆ ಬಂದ ಆರೋಪಿ ಗಣಪತಿ ಮಾತನಾಡುತ್ತಿರುವಾಗ ವ್ಯವಸ್ಥಾಪಕ ಲೋಕೇಶ್ ಸಾಲದ ದಾಖಲಾತಿಗೆ ಚೆಕ್ ನೀಡಿ, ಸಾಲ ನವೀಕರಣ ಗೊಳಿಸಿಕೊಳ್ಳಿ ಎಂದು ಹೇಳಿದಾಗ ಗಣಪತಿ ಅವಾಚ್ಯ ಶಬ್ಧಗಳಿಂದ ನಿಂದಿಸಿ; ಬ್ಯಾಂಕ್‍ನಲ್ಲಿ ಮಾರಾಟ ಕ್ಕೆಂದು ಇಟ್ಟಿದ್ದ ಕತ್ತಿಯಿಂದ ಲೋಕೇಶ್‍ನ ತಲೆ ಭಾಗಕ್ಕೆ ಹಲ್ಲೆ ನಡೆಸಿ ಕತ್ತಿ ಸಹಿತ ಅಲ್ಲಿಂದ ಪರಾರಿ ಯಾಗಿದ್ದ.

ಆರೋಪಿತ ಕತ್ತಿ ಹಿಡಿದು ಪರಾರಿಯಾಗುವ ವೇಳೆ ಆತನ ಫೋಟೋವನ್ನು ಪ್ರತ್ಯಕ್ಷದರ್ಶಿಗಳು ಸೆರೆಹಿಡಿದಿದ್ದಾರೆ. ಕಳೆದ 8 ವರ್ಷಗಳಿಂದ ವ್ಯವಸ್ಥಾಪಕ ಲೋಕೇಶ್ ಬ್ಯಾಂಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆಗೆ ಒಳಗಾಗಿದ್ದು, ತಲೆ ಭಾಗಕ್ಕೆ 6 ಹೊಲಿಗೆ ಹಾಕಲಾಗಿದೆ.