ಸಿದ್ದಾಪುರ, ನ. 12: ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಒಂಟಿಯಂಗಡಿಯ ಮನೆಯೊಂದರಲ್ಲಿ ರಾಜೇಶ್ವರಿ ಎಂಬವರು ಮಹಿಳೆಯರ ಬರವಣಿಗೆ ಗ್ರಂಥಾಲಯ ನಡೆಸುತಿದ್ದು, ಮಹಿಳೆಯರನ್ನು ಮೋಸ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜ ರಾಜೇಶ್ವರಿ ರೈಟಿಂಗ್ ಲ್ಯಾಬ್ ಎಂಬ ಹೆಸರಿನಲ್ಲಿ ಗ್ರಂಥಾಲಯ ನಡೆಸಲಾಗುತ್ತಿದ್ದು, ಗ್ರಂಥಾಲಯಕ್ಕೆ ಬೇಕಾದ ಯಾವದೇ ಪರವಾನಗಿ ಪಡೆಯದ ಬಗ್ಗೆ ಗ್ರಂಥಾಲಯಕ್ಕೆ ನಾಮಫಲಕ ಅಳವಡಿಕೆ ಮಾಡಲಿಲ್ಲ ಎಂಬ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಜೇಶ್ವರಿ ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದಿರುವದಾಗಿ ತಿಳಿಸಿದರು.

ಈ ಸಂದರ್ಭ ಸುನಿತಾ ಮಂಜುನಾಥ್ ಮಾತನಾಡಿ, ಎರಡು ತಿಂಗಳ ಹಿಂದೆಯೇ ಗ್ರಂಥಾಲಯ ಪ್ರಾರಂಭ ಮಾಡಲಾಗಿದ್ದು, ಸಂಬಂಧಪಟ್ಟ ಇಲಾಖೆಯಿಂದ ಯಾವದೇ ಪರವಾನಗಿ ಪಡೆದುಕೊಂಡಿಲ್ಲ. ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ಪಿಡಿಒ ಅನಿಲ್ ಕುಮಾರ್ ಗ್ರಾ.ಪಂ ವತಿಯಿಂದ ಲೈಸನ್ಸ್ ನೀಡಿದ್ದಾರೆ. ಪೂರ್ವ ಪರ ವಿಚಾರಿಸದೆ ಲೈಸನ್ಸ್ ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬರವಣಿಗೆಯ ಹೆಸರಿನಲ್ಲಿ ಅಮಾಯಕ ಮಹಿಳೆಯರನ್ನು ವಂಚನೆ ಮಾಡಲಾಗುತ್ತಿದ್ದು, ಪ್ರಿಂಟ್ ಆಗಿರುವ 25 ಪುಸ್ತಕಗಳನ್ನು ಒಂದು ತಿಂಗಳ ಒಳಗೆ ನೋಟ್ ಪುಸ್ತಕಕ್ಕೆ ಕೈ ಬರಹದ ಮೂಲಕ ಬರೆದು ನೀಡಿದಲ್ಲಿ ರೂ. 10,000 ಮಾಸಿಕ ಸಂಬಳ ನೀಡುವದಾಗಿ ತಿಳಿಸಲಾಗಿದೆ. ಆದರೆ ಹಲವು ಮಂದಿ 25 ಪುಸ್ತಕ ಬರೆಯಲು ಸಾಧ್ಯವಾಗದೇ ಲೈಬ್ರರಿಗೆ ತೆರಳುವದನ್ನು ನಿಲ್ಲಿಸಿದ್ದಾರೆ. 25 ಪುಸ್ತಕ ಬರೆದು ನೀಡಿದವರಿಗೆ ಅಕ್ಷರ ತಪ್ಪಿನ ನೆಪ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ದಾಖಲಾತಿ ಶುಲ್ಕ ರೂ. 2000 ವಸೂಲಿ ಮಾಡಲಾಗುತ್ತಿದ್ದು, ಹಣದ ವ್ಯವಹಾರವನ್ನು ನಗದು ಮೂಲಕವೇ ಮಾಡಲಾಗುತ್ತಿದೆ. ಹಣ ಪಡೆದುಕೊಂಡಿರುವದಕ್ಕೆ ನೀಡುತ್ತಿರುವ ರಸೀದಿಯಲ್ಲಿ ಅಧಿಕೃತ ಸೀಲ್ ಕೂಡ ಇಲ್ಲ. ಈ ಬಗ್ಗೆ ಜಿ.ಪಂ ಸಭೆಯಲ್ಲಿಯೂ ಪ್ರಸ್ತಾಪ ಮಾಡಲಾಗಿದೆ ಎಂದರು.

ಈ ಸಂದರ್ಭ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ್, ಗ್ರಾ.ಪಂ. ಪಿ.ಡಿ.ಓ ಅನಿಲ್ ಕುಮಾರ್ ಇದ್ದರು.