ಮಡಿಕೇರಿ, ನ.12: ವಿಧಾನಮಂಡಲ ಸಭೆಯ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಸಾ.ರಾ.ಮಹೇಶ್ ಹಾಗೂ ಸದಸ್ಯರಾದ ಎಂ.ಶ್ರೀನಿವಾಸ್, ಸಿ.ಎಂ.ಲಿಂಗಪ್ಪ, ಟಿ.ರಘುಮೂರ್ತಿ, ಸುನಿಲ್ ಬಿಳಿಯ ನಾಯಕ್, ಜಯಮ್ಮ ಮತ್ತು ಶಾಸಕ ಯು.ಟಿ.ಖಾದರ್ ಅವರ ನೇತೃತ್ವದ ತಂಡದವರು ಕರ್ಣಂಗೇರಿಗೆ ಭೇಟಿ ನೀಡಿ ಮನೆಗಳನ್ನು ವೀಕ್ಷಿಸಿದರು.
2018ರ ಆಗಸ್ಟ್ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮನೆ ಮಠ ಕಳೆದುಕೊಂಡ 35 ಸಂತ್ರಸ್ತರಿಗೆ ಕರ್ಣಂಗೇರಿಯಲ್ಲಿ ಈಗಾಗಲೇ ಮನೆಗಳನ್ನು ಹಸ್ತಾಂತರಿಸಲಾಗಿದ್ದು, ಈ ಮನೆಗಳನ್ನು ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಗದ ಪತ್ರಗಳ ಸಮಿತಿ ಅಧ್ಯಕ್ಷ ಸಾ.ರಾ.ಮಹೇಶ್ ಅವರು ಮಾತನಾಡಿ 2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಇಲ್ಲಿನ ಜನರು ತುಂಬಾ ಸಂಕಷ್ಟ ಎದುರಿಸಿದರು. ಸಂತ್ರಸ್ತರ ಭವಣೆ ನಿವಾರಿಸುವ ನಿಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ಸ್ಪಂದಿಸಿತ್ತು. ಆ ನಿಟ್ಟಿನಲ್ಲಿ ಇಡೀ ದೇಶದಲ್ಲಿ ಮಾದರಿ ಮನೆಯನ್ನು ಸರ್ಕಾರ ನಿರ್ಮಿಸಿ ಜನರಿಗೆ ಸ್ಪಂದಿಸಿದೆ. ಜೊತೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅದರಂತೆ ಈ ವರ್ಷ ಪ್ರಕೃತಿ ವಿಕೋಪದಿಂದ ನೊಂದವರಿಗೆ ಮನೆ ನಿರ್ಮಿಸಿಕೊಡುವ ವಿಶ್ವಾಸವಿದೆ ಎಂದು ಅವರು ಹೇಳಿದರು.
2018ರಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ತಕ್ಷಣ ಪರಿಹಾರಕ್ಕಾಗಿ ಒಂದು ಲಕ್ಷ ರೂ., ಮನೆಯಲ್ಲಿನ ವಸ್ತುಗಳನ್ನು ಕಳೆದುಕೊಂಡವರಿಗೆ 50 ಸಾವಿರ ರೂ. ಹೀಗೆ ಸಂತ್ರಸ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿ ನೆಮ್ಮದಿ ಮತ್ತು ಸ್ವಾಭಿಮಾನದ ಬದುಕು ನಡೆಸಲು ಸರ್ಕಾರ ಶ್ರಮಿಸಿದೆ ಎಂದು ಅವರು ಹೇಳಿದರು.
ಶಾಸಕ ಯು.ಟಿ.ಖಾದರ್ ಮಾತನಾಡಿ 2018 ರಲ್ಲಿ ಪ್ರಕೃತಿ ವಿಕೋಪದಿಂದಾಗಿ ಮನೆ ಕಳೆದು ಕೊಂಡವರಿಗೆ 9.85 ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿರು ವದು ಇಡೀ ದೇಶದಲ್ಲಿಯೇ ಮಾದರಿಯಾಗಿದೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ವಸತಿ ಸಚಿವರು ಇತರರೊಂದಿಗೆ ಚರ್ಚಿಸಿ ಎರಡು ಬೆಡ್ ರೂಂ ಒಳಗೊಂಡ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿತ್ತು. ಆ ನಿಟ್ಟಿನಲ್ಲಿ ಮಾದರಿ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.
ಮನೆ ಕಳೆದುಕೊಂಡವರಿಗೆ ಜಾಗ ಗುರುತಿಸಿ ಮನೆಗಳ ನಿರ್ಮಾಣಕ್ಕೆ ಆ ಸಂದರ್ಭದಲ್ಲಿ ಮುಂದಾಗಲಾಯಿತು. ಮನೆ ಹಸ್ತಾಂತರಿಸುವವರೆಗೆ ಸಂತ್ರಸ್ತರಿಗೆ ತಿಂಗಳಿಗೆ 10 ಸಾವಿರ ರೂ. ಬಾಡಿಗೆ ಭರಿಸುವದು. ಅಗತ್ಯ ವಸ್ತುಗಳನ್ನು ಕಳೆದುಕೊಂಡ ಕುಟುಂಬಗಳಿಗೆ 50 ರೂ. ಪರಿಹಾರ ಹೀಗೆ ಅಗತ್ಯ ಮೂಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿತ್ತು ಎಂದು ಸ್ಮರಿಸಿದರು.
ಸಂತ್ರಸ್ತರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸರ್ಕಾರ ಸಾಧ್ಯವಾದಷ್ಟು ಪ್ರಯತ್ನಿಸಿದೆ. ಆರಂಭದಲ್ಲಿ ಒಂದು ಬೆಡ್ ರೂಂಗಳನ್ನು ಒಳಗೊಂಡ ಮನೆಗಳನ್ನು ನಿರ್ಮಿಸಲು ಉದ್ದೇಶಿಸ ಲಾಗಿತ್ತು, ನಂತರ ಎರಡು ಬೆಡ್ ರೂಂನ್ನು ಒಳಗೊಂಡ ಮನೆಗಳನ್ನು ನಿರ್ಮಿಸಿ ಮೂಲ ಸೌಲಭ್ಯ ಕಲ್ಪಿಸಿರುವದು ವಿಶೇಷವಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕರ್ಣಂಗೇರಿಯಲ್ಲಿ 35 ಮನೆಗಳನ್ನು ಹಸ್ತಾಂತರಿಸಲಾಗಿದೆ. ಉಳಿದಂತೆ ಮದೆ, ಮಾದಾಪುರದಲ್ಲಿ ಮನೆ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಜಿ.ಪಂ.ಉಪಕಾರ್ಯದರ್ಶಿ ಗುಡೂರು ಭೀಮಸೇನ, ತಾ.ಪಂ.ಇಒ ಲಕ್ಷ್ಮೀ ಇತರರು ಇದ್ದರು.