ಮಡಿಕೇರಿ, ನ. 12: ಪದವಿಪೂರ್ವ ಕಾಲೇಜುಗಳ 2019-20ನೇ ಸಾಲಿನ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ, ಪಾರದರ್ಶಕವಾಗಿ ಮತ್ತು ಇಲಾಖೆಯ ನಿರ್ದೇಶನದಂತೆ ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾ. 14 ರಂದು ನಡೆಸಲು ತಯಾರಿ ನಡೆದಿದೆ.
ಹೀಗಿರುವಾಗ ತಮಗೆ ಆಹ್ವಾನ ನೀಡಿಲ್ಲವೆಂದು ಕೊಡಗು ಜಿಲ್ಲೆಯ ಉಪನ್ಯಾಸಕರ ಸಂಘ ಈ ಕಾರ್ಯಕ್ರಮದ ಕುರಿತು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಯಾವದೇ ಹುರುಳಿಲ್ಲ ಎಂದು ಪ್ರಾಚಾರ್ಯರ ಸಂಘದ ಸದಸ್ಯ, ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪಿ.ಆರ್. ವಿಜಯ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮತ್ತು ಕಾರ್ಯನಿರ್ವಹಿಸುತ್ತಿರುವ ಪ್ರಾಚಾರ್ಯರ ಸಂಘದ ಕುರಿತು ತಪ್ಪು ಮಾಹಿತಿಯನ್ನು ನೀಡಿರುವ ಬಗ್ಗೆ ಜಿಲ್ಲಾಡಳಿತ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.