ಮಡಿಕೇರಿ, ನ. 11: ಶತಮಾನ ಕಂಡ ಕನ್ನಡ ಶಾಲೆಯ ಮಕ್ಕಳಿಗೆ ನಗರಸಭೆ ಆಡಳಿತ ವರ್ಗ ಮಳೆಗಾಲದಲ್ಲಿ ಸ್ವೆಟರ್ಗಳನ್ನು ನೀಡದಿರುವದರಿಂದ ಬಡ ಮಕ್ಕಳು ತಮ್ಮ ಹಳೆಯ ಹರಿದ ಸ್ವೆಟರ್ಗಳನ್ನು ಹಾಕುತ್ತ ಬರುತ್ತಿದ್ದು ಈ ವಿದ್ಯಾರ್ಥಿಗಳ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಅಧಿಕಾರಿ ವರ್ಗ ದುರುಪಯೋಗ ಪಡಿಸಿಕೊಂಡಿರಬಹುದೆಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಶಾಲೆ ಮತ್ತು ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಮೂಲಭೂತ ಸೌಕರ್ಯ ನೀಡುವಲ್ಲಿ ನಗರಸಭೆ ಕೆಲವು ವರ್ಷಗಳಿಂದ ವಂಚನೆಗೈಯುತ್ತಿರುವದರ ಬಗ್ಗೆ ಪೋಷಕರು ನಗರಸಭಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ನಗರದಲ್ಲಿ ನಗರಸಭೆಗೆ ಸೇರಿದ ಮೂರು ಕನ್ನಡ ಶಾಲೆಗಳಿದ್ದು ಈ ಮೂರೂ ಶಾಲೆಗಳಲ್ಲಿ ಒಟ್ಟು 127 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರ, ಆರ್ಥಿಕವಾಗಿ ತೀರಾ ಹಿಂದುಳಿದವರ, ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಹಿಂದಿನ ಪ್ರತಿವರ್ಷಗಳೆಲ್ಲವೂ ವಿದ್ಯಾರ್ಥಿಗಳಿಗೆ ನಗರಸಭೆಯಿಂದ ಸಮವಸ್ತ್ರ, ಪಾದರಕ್ಷೆ, ಪುಸ್ತಕ-ಲೇಖನಿ ಸಾಮಗ್ರಿ, ಮಧ್ಯಾಹ್ನದ ದಾಸೋಹ ಇತ್ಯಾದಿ ಶೈಕ್ಷಣಿಕ ಸವಲತ್ತುಗಳನ್ನು ಮತ್ತು ಸ್ವಟರ್ಗಳನ್ನು ನೀಡಲಾಗುತ್ತಿತ್ತು. ಆದರೆ, ನಗರಸಭೆಯಿಂದ ಇತ್ತೀಚಿನ ವರ್ಷಗಳಲ್ಲಿ ವಂಚಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಟೆಂಡರ್ ಆಗಿದೆ
ನಗರಸಭೆಯ ಮೂರು ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಶೈಕ್ಷಣಿಕ ಸವಲತ್ತುಗಳನ್ನು ವಿತರಿಸಲು ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಉಳಿದ ಆಡಳಿತಾತ್ಮಕ ಪ್ರಕ್ರಿಯೇ ಆಗಬೇಕಷ್ಟೇ. ಕೂಡಲೇ ಕ್ರಮ ಕೈಗೊಳ್ಳಲಾಗುವದು. ಈಗಾಗಲೇ ವಿತರಿಸಬೇಕಿತ್ತು. ಕೆಲ ಅನಿವಾರ್ಯ ಕಾರಣಗಳಿಂದ ವಿಳಂಬವಾಯಿತು ಎಂದು ನಗರಸಭೆ ಆಯುಕ್ತ ಎಂ.ಎಲ್. ರಮೇಶ್ ತಿಳಿಸಿದ್ದಾರೆ.
ನಗರಸಭೆಗೆ ಸೇರಿದ ಮೂರು ಕನ್ನಡ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಶಿಕ್ಷಣದಿಂದ ವಂಚನೆ ಗೊಳ್ಳಬಾರದು; ಈ ಶಾಲೆಗಳು ಶಾಶ್ವತವಾಗಿ ಮುಚ್ಚಿಹೋಗಬಾರದು ಎಂಬ ಉದ್ದೇಶದಿಂದ ಈ ಶಾಲೆಯ ಮಕ್ಕಳಿಗೆ ಸ್ವೆಟರ್ಗಳನ್ನು ವಿತರಿಸುತ್ತಿದ್ದೇನೆ ಎಂದು ನಗರಸಭಾ ಮಾಜಿ ಸದಸ್ಯ ಕೆ.ಜಿ. ಪೀಟರ್ ತಿಳಿಸಿದ್ದಾರೆ.
- ಶ್ರೀವತ್ಸ