ಕಣಿವೆ, ನ. 11: ಮನೆಗೆ ಆಗಮಿಸುವ ಅತಿಥಿಗಳಿಗೆ ಮತ್ತು ನೆಂಟರಿಷ್ಟರಿಗೆ ಸ್ವಾಗತ ಕೋರುವ ಹಸಿರು ಹಾಸಿನ ಹೂ ಬಳ್ಳಿ... ಆ ಕಮಾನು ಬಳ್ಳಿಗಳ ಒಳಗಿಂದ ತೂರಿ ಬಂದು ಮನಕ್ಕೆ ತಂಪೆರೆದು ನರ್ತಿಸುವ ತಂಗಾಳಿ... ಮನೆಯ ವಠಾರದಲ್ಲಂತೂ ಮನಕ್ಕೆ ಮುದ ನೀಡುವ ತರಹೇವಾರಿ ಹಸಿರು ಬಳ್ಳಿಗಳು... ಇದು ಕಂಡು ಬಂದದ್ದು, ಗೋಣಿಮರೂರು ಬಳಿಯ ಯಡುಂಡೆ ಗ್ರಾಮದ ಮಾಜಿ ಸೈನಿಕ ಪಳಂಗೋಟು ಸೋಮಣ್ಣ (ರವಿ) ಅವರ ಮನೆಯ ಪರಿಸರದಲ್ಲಿ. ಬಹಳಷ್ಟು ಮಂದಿ ಏನೆಲ್ಲಾ ಮತ್ತು ಎಷ್ಟೆಲ್ಲಾ ಅವಕಾಶಗಳು ತಮ್ಮ ಮುಂದೆ ಇದ್ದರೂ ಗಳಿಸಿಕೊಳ್ಳದೇ ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಮನೆಯಂಗಳದಲ್ಲಿ ಅಂಗೈಯಗಲ ಜಾಗ ಸಿಕ್ಕರೂ ಸಾಕು, ತಮ್ಮಲ್ಲಿನ ಜಾಣ್ಮೆಯನ್ನು ಉಪಯೋಗಿಸಿಕೊಂಡು ಆ ಅಂಗೈಯಗಲ ಜಾಗಕ್ಕೆ ಸುಂದರವಾದ ರೂಪ ಕೊಡುವವರು ಇದ್ದಾರೆ. ಮತ್ತೆ ಕೆಲವರು ಪ್ರಾಕೃತಿಕವಾಗಿ ದೊರಕುವ ವಸ್ತುಗಳನ್ನು ಕಡೆಗಣಿಸಿ, ಕೃತಕವಾದ ಹುಲ್ಲು -ಹಾಸು, ಹೂ ಕುಂಡ, ಮತ್ತು ತಳಿರು - ತೋರಣಗಳಿಂದ ತಮ್ಮ ಮನೆಗಳನ್ನು ಅಂದಗೊಳಿಸುವ ಪ್ರಯತ್ನದಲ್ಲಿ ನಿರತ (ವ್ಯರ್ಥ)ರಾಗಿರುತ್ತಾರೆ. ಮನೆಯ ಆವರಣವನ್ನೇ ಉದ್ಯಾನವಾಗಿಸಿ ಮನೆಯ ಸುತ್ತಲಿನ ಒಂದು ಮುಕ್ಕಾಲು ಎಕರೆ ಪ್ರದೇಶದಲ್ಲಿ ಸುಮಾರು 30 ಕ್ಕೂ ಅಧಿಕ ರೀತಿಯ ಹಣ್ಣು, ಹೂ, ತರಕಾರಿ, ಆಯುರ್ವೇದದ ಗಿಡ ಮೂಲಿಕೆಗಳನ್ನು ಬೆಳೆದು ಈ ಪ್ರದೇಶಕ್ಕೆ ಮಾದರಿಯಾಗಿದ್ದಾರೆ.
ಸೇನೆಯಲ್ಲಿ 20 ವರ್ಷಗಳ ಸೇವೆ ಸಲ್ಲಿಸಿರುವ ರವಿ, ನಿವೃತ್ತಿ ಬಳಿಕ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದುವ ಮೂಲಕ ತಮ್ಮ ಮನೆಯ ಅಂಗಳದಲ್ಲಿ ಉದ್ಯಾನದ ನಿರ್ಮಾಣಕ್ಕೆ ಪಣ ತೊಟ್ಟರು. ಇವರ ಈ ಆಸಕ್ತಿಗೆ ಇವರ ಪತ್ನಿ ರೇವತಿ, ಮಗಳು ಲೀನಾ ಶ್ರೀ, ಮಗ ರೋಷನ್ ಕೈ ಜೋಡಿಸಿದರು. ಗೋಣಿ ಮರೂರು ಗ್ರಾಮದಿಂದ ಗಣಗೂರು ಗ್ರಾಮಕ್ಜೆ ತೆರಳುವ ರಸ್ತೆಯ ಬದಿಯಲ್ಲಿ ತಮ್ಮ ಸ್ವಾಧೀನದ ಒಂದುಮುಕ್ಕಾಲು ಎಕರೆ ಜಾಗದಲ್ಲಿದ್ದ ಅನುಪಯುಕ್ತ ಕಾಡು ಗಿಡಗಳನ್ನು ನಿರ್ನಾಮ ಮಾಡಿ ಈಗ
(ಮೊದಲ ಪುಟದಿಂದ) ವೈವಿಧ್ಯಮಯ ತೋಟವನ್ನು ನಿರ್ಮಾಣ ಮಾಡಿದ್ದಾರೆ. ಆ ತೋಟ ಹೇಗಿದೆ ಎಂದರೆ, ಅದೊಂದು ಹಚ್ಛ ಹಸಿರಿನ ವನ ರಾಶಿಯೊಳಗಿನ ಹೂ ಬಳ್ಳಿಗಳ ಹಂದರವಾಗಿ, ತೋಟಗಾರಿಕಾ ಬೆಳೆಗಳ ಮತ್ತು ಔಷಧಿ ಗಿಡಗಳ ಕಾಶಿಯಾಗಿದೆ. ಇಲ್ಲಿ ವೆನಿಲ್ಲಾ ಇದೆ. ಬಟರ್ ಫ್ರೂಟ್ ಇದೆ. ಲಕ್ಷ್ಮಣ ಫಲ, ಚೆರಿ, ಲಿಚ್ಚಿ, ಆ್ಯಪಲ್, ಹೆಣ್ಣು ಜಾತಿಯ ಮಡಗಲ ಕಾಯಿ ಬಳ್ಳಿ ಇದೆ. ಫೀನಟ್ ಬಟರ್, ಡ್ರಾಗನ್ ಫ್ರೂಟ್ಸ್, ಮರಗೆಣಸು, ಕಾಳು ಮೆಣಸು, ಶುಂಠಿ, ಪಪ್ಪಾಯ, ಅಡಿಕೆ, ತೆಂಗು, ಕಹಿ ಹುಳಿ, ನಿಂಬೆ, ಏಲಕ್ಕಿ, ಮೆಹಂದಿ, ನರ್ವಿಶ, ದೊಡ್ಡಪತ್ರೆ, ಗಾಳಿ ಸೊಪ್ಪಿನ ಗಿಡ, ಲೋಳೆ ಸರ, ಬಸಳೆ, ಒಂದೆಲಗ ಹೀಗೆ ಹತ್ತಾರು ಮಾದರಿಯ ಜೀವ ವೈವಿಧ್ಯ ಕಣಜವೇ ಈ ತೋಟದಲ್ಲಿದೆ.
ಇಡೀ ತೋಟವನ್ನು ಸಾವಯವ ಗೊಬ್ಬರದಿಂದ ನಿರ್ವಹಿಸುತ್ತಿರುವದು ಇಲ್ಲಿ ಮತ್ತೊಂದು ವಿಶೇಷ. ದಿನದ ಮಂಜಾನೆ ಮತ್ತು ಮುಸ್ಸಂಜೆಯ ಕೆಲವು ಗಂಟೆಗಳು ತೋಟದ ಸ್ವಚ್ಛತೆಗೆ ಸಮಯ ನಿಗದಿಗೊಳಿಸಿರುವ ಪರಿಸರ ಕಾಯಕದ ರವಿ ತಮ್ಮ ಮುದ್ದು ಮಗಳೊಂದಿಗೆ ಸೇರಿ ಗಿಡ ಬಳ್ಳಿಗಳಿಗೆ ನೀರುಣಿಸುವ, ಸಾವಯವ ಗೊಬ್ಬರ ಹಾಕುವ, ಮರಗಳಿಂದ ಉದುರುವ ತರಗೆಲೆಗಳನ್ನು ಗುಡಿಸಿ ಬಳ್ಳಿಗಳ ಬುಡಕ್ಕೆ ಹಾಕಿ ಗೊಬ್ಬ್ವರವಾಗಿಸುವ ಕಾಯಕ, ಆ ಹಸಿರುಡುಗೆ ತೊಟ್ಟು ನಿಂತ ಭೂ ದೇವಿಗೆ ಅರ್ಪಣೆ ಮಾಡಿದಂತಿದೆ. ಮನೆಗೆ ಬಳಸುವ ಆಹಾರದ ಖಾಲಿ ಪೊಟ್ಟಣಗಳು, ಎಣ್ಣೆ ಕ್ಯಾನ್ಗಳು, ಬಾಟಲಿಗಳಿಗೆ ಮಣ್ಣು ತುಂಬಿಸಿ ಅವುಗಳನ್ನು ಮನೆಯ ಒಂದು ಬದಿಯಲ್ಲಿ ಸಾಲಾಗಿ ಜೋಡಿಸಿ ಅವುಗಳಲ್ಲಿ ಹೂ ಬಳ್ಳಿಗಳನ್ನು ನೆಟ್ಟು ಬೆಳೆಸಿರುವದು ಕಸದಿಂದ ರಸ ತೆಗೆದಂತಿದೆ.
ಇಂಜಿನಿಯರಿಂಗ್ ಪದವೀಧರೆಯಾಗಿರುವ ಲೀನಾ ಶ್ರೀ ತನ್ನ ತಂದೆ ರವಿ ಜೊತೆ ಸೇರಿ ಒಣ ಭೂಮಿಯಲ್ಲಿ ಹಸಿರು ಮೂಡಿಸುವ ಉದ್ಯಾನವನ ನಿರ್ಮಾಣದ ಕೆಲಸಕ್ಕೆ ಅಪ್ಪನ ಜೊತೆ ಕೈ ಜೋಡಿಸುತ್ತಿದ್ದಾರೆ. ಮನೆಯಂಗಳ ಅಥವಾ ಕಚೇರಿಗಳ ಆವರಣದಲ್ಲಿ ಸಣ್ಣ ಪುಟ್ಟ ಉದ್ಯಾನವನ ಮಾಡಬೇಕೆಂಬ ಬಯಕೆ ಉಳ್ಳವರು ಪಳಂಗೋಟು ರವಿ ಅವರನ್ನು ಸಂಪರ್ಕಿಸಿದರೆ ಅಗತ್ಯ ಮಾಹಿತಿ ಹಾಗೂ ಸಹಕಾರ ನೀಡುತ್ತಾರೆ. ಇದೀಗ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ರಕ್ಷಾ ಸಮಿತಿಯ ಕೋರಿಕೆ ಮೇರೆಗೆ ಪಳಂಗೋಟು ರವಿ ಮತ್ತು ಲೀನಾ ಶ್ರೀ ಅವರು ಪಾರ್ಕ್ ಮಾಡುತ್ತಿದ್ದಾರೆ. ಈ ಬಗ್ಗೆ ‘ಶಕ್ತಿ’’ಯೊಂದಿಗೆ ಮಾತನಾಡಿದ ಪಳಂಗೋಟು ರವಿ, ನನಗೆ ಮೊದಲಿನಿಂದಲೂ ಪರಿಸರದ ಮೇಲೆ ವಿಶೇಷ ಆಸಕ್ತಿ. ಗಿಡ - ಮರಗಳು, ಪ್ರಾಣಿ - ಪಕ್ಷಿಗಳು, ಬಣ್ಣ ಬಣ್ಣದ ಚಿಟ್ಟೆಗಳು ನಮ್ಮ ಮನಸನ್ನು ಸೊಗಸಾಗಿಸುತ್ತವೆ. ಅವೆಲ್ಲವೂ ಇರಬೇಕೆಂದರೆ ಒಣ ಭೂಮಿ ಹಸಿರಾಗಬೇಕು. ಆ ಕೆಲಸವನ್ನು ಎಲ್ಲರೂ ಮಾಡಬೇಕು. ಉದ್ಯಾನ ನಿರ್ಮಾಣ ಮನುಷ್ಯನ ಆರೋಗ್ಯಕ್ಕೆ ಒಂದು ವಿಟಮಿನ್ ಇದ್ದಂತೆ. ಹಾಗಾಗಿ ಮನೆಯ ಆವರಣದಲ್ಲಿ ವಿಶೇಷವಾಗಿ ರೂಪಿಸಿದ್ದೇನೆ. ಈ ಉದ್ಯಾನವನ್ನು ನೋಡಲು ಬಹಳಷ್ಟು ಮಂದಿ ಬರುತ್ತಾರೆ. ಆನಂದಿಸುತ್ತಾರೆ. ಅಭಿನಂದಿಸುತ್ತಾರೆ. ಆದರೆ ಎಲ್ಲರ ಮನೆಗಳು ಉದ್ಯಾನಗಳಾಗಬೇಕು ಎಂಬದು ನನ್ನ ಅಭಿಮತ ಎನ್ನುತ್ತಾರೆ. ಉದ್ಯಾನ ಮಾಡುವ ಮನಸುಳ್ಳವರಿಗೆ ಹೆಚ್ಚಿನ ಮಾಹಿತಿಗೆ 96638 - 00385 ಸಂಪರ್ಕಿಸಬಹುದು.