ಮಡಿಕೇರಿ, ನ. 11 : ಕೊಡಗು ಜಿಲ್ಲೆ ಒಂದೊಮ್ಮೆ ‘ಸಿ’ ರಾಜ್ಯವಾಗಿದ್ದು; ಕಾಲಾನುಕ್ರಮದಲ್ಲಿ ಕರ್ನಾಟಕದೊಂದಿಗೆ ವಿಲೀನದ ಬಳಿಕ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತಗೊಂಡಿತ್ತು. ಜಿಲ್ಲೆ ಒಳಗೊಂಡಿದ್ದ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕುಗಳು ಪ್ರತ್ಯೇಕವಾದ ವಿಧಾನಸಭಾ ಕ್ಷೇತ್ರಗಳಾಗಿತ್ತಾದರೂ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ ಮೂರು ತಾಲೂಕುಗಳು ಯಥಾಸ್ಥಿತಿಯಲ್ಲಿ ಉಳಿದರೂ ವಿಧಾನಸಭಾ ಕ್ಷೇತ್ರಗಳು ಮಾತ್ರ ಎರಡಾಗಿ ಪರಿವರ್ತನೆಗೊಂಡಿರುವದು ಇತಿಹಾಸ.ಈ ಸಂದರ್ಭದಲ್ಲಿ ಜಿಲ್ಲೆ ಒಳಗೊಂಡಿರುವ ಮೂರು ತಾಲೂಕುಗಳು ವಿಶಾಲವಾದ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು; ಅಗತ್ಯ ಕೆಲಸ ಕಾರ್ಯಗಳಿಗೆ ಜನಸಾಮಾನ್ಯರಿಗೆ ತೀರಾ ತೊಂದರೆಯಾಗುತ್ತಿದೆ ಎಂಬ ಕೂಗು ವ್ಯಕ್ತಗೊಂಡಿತ್ತು. ಪರಿಣಾಮವಾಗಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಕಿಗ್ಗಟ್ಟ್‍ನಾಡ್ ವ್ಯಾಪ್ತಿಯ ಗ್ರಾಮ, ಹೋಬಳಿಗಳನ್ನು ಒಳಗೊಂಡಂತೆ ನೂತನವಾಗಿ ಪೊನ್ನಂಪೇಟೆ ತಾಲೂಕು ಹಾಗೂ ಕುಶಾಲನಗರವನ್ನು ಕೇಂದ್ರವನ್ನಾಗಿಸಿ ಕಾವೇರಿ ತಾಲೂಕು ರಚನೆ ಮಾಡಬೇಕೆಂಬ ನಿಟ್ಟಿನಲ್ಲಿ ಕ್ರಮೇಣ ಒತ್ತಾಯ ಏರ್ಪಟ್ಟು ಇದು ಹೋರಾಟದ ಸ್ವರೂಪವನ್ನು ಪಡೆದಿದ್ದು, ಸ್ಮರಣೀಯವಾಗಿದೆ.

ಪೊನ್ನಂಪೇಟೆ ಹಾಗೂ ಕುಶಾಲನಗರ ನೂತನ ತಾಲೂಕು ರಚನೆ ಸಂಬಂಧವಾಗಿ ಹೋರಾಟ ಸಮಿತಿಗಳೂ ರಚನೆಗೊಂಡವು. ಪಕ್ಷಾತೀತ, ಜಾತ್ಯತೀತವಾಗಿ ಈ ಹೋರಾಟ ಆರಂಭಗೊಂಡು ದಿನೇ ದಿನೇ ಇದರ ಕಿಚ್ಚು ಹೆಚ್ಚಾಗಿತ್ತು ಬಂದ್ ಆಚರಣೆಯೂ ನಡೆಯಿತು. ಕುಶಾಲನಗರ ಹಾಗೂ ಪೊನ್ನಂಪೇಟೆಯಲ್ಲಿ ಕೆಲವು ಸಮಯದ ಹಿಂದೆ ತಿಂಗಳಿಗೂ ಅಧಿಕ ಕಾಲ ನಿರಂತರವಾಗಿ ವಿವಿಧ ಗ್ರಾಮಗಳ ಜನತೆ ರಾಜಕೀಯ ರಹಿತವಾಗಿ ತಾಲೂಕು ರಚನೆಯಾಗಲೇಬೇಕೆಂದು ಧರಣಿ ನಡೆಸಿದ್ದು, ಇಲ್ಲಿ ಉಲ್ಲೇಖನೀಯ. ಧರಣಿ ಸ್ಥಳಕ್ಕೆ ಹಲವಾರು ಜನಪ್ರತಿನಿಧಿಗಳು ಭೇಟಿ ನೀಡಿ ಸಹಮತ ವ್ಯಕ್ತಪಡಿಸಿದ್ದೂ ಆಗಿತ್ತು. ಇದೇ ವೇಳೆಯಲ್ಲಿ ವಿಧಾನಸಭಾ ಚುನಾವಣೆಯೂ ಎದುರಾಗಿದ್ದು; ಇದೂ ಒಂದು ದಾಳವಾಗಿತ್ತು.

ಕೊನೆಗೂ ಕಳೆದ ಸಾಲಿನ ಬಜೆಟ್‍ನಲ್ಲಿ ಜಿಲ್ಲೆಯ ಎರಡು ತಾಲೂಕುಗಳ ರಚನೆ ಕುರಿತಾದ ಪ್ರಸ್ತಾಪ ಬಾರಲಿಲ್ಲವಾದರೂ ರಾಜ್ಯದಲ್ಲಿ ರಚನೆಗೊಂಡಿದ್ದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರಾಕೃತಿಕ ವಿಕೋಪದ ಸಂಬಂಧಿತ ಕಾರ್ಯಕ್ರಮಕ್ಕೆ ಜಿಲ್ಲೆಗೆ ಆಗಮಿಸಿದ್ದ ಸಂದರ್ಭ ಬಸವನಹಳ್ಳಿಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು.

(ಮೊದಲ ಪುಟದಿಂದ)

ಆದರೆ ಘೋಷಣೆ ಮಾತ್ರ

ಕುಶಾಲನಗರ ಹಾಗೂ ಪೊನ್ನಂಪೇಟೆಯನ್ನು ನೂತನ ತಾಲೂಕಾಗಿ ಸರಕಾರದ ಮೂಲಕ ಪ್ರಕಟಿಸಿದ್ದು; ಇನ್ನೂ ಘೋಷಣೆಯಾಗಿ ಉಳಿದಿದೆಯೇ ಹೊರತು ಹಲವಾರು ತಿಂಗಳುಗಳು ಉರುಳಿದರೂ ಈ ಬಗ್ಗೆ ಯಾವದೇ ಅಧಿಕೃತವಾದ ಪ್ರಕ್ರಿಯೆಗಳು ಜರುಗಿಲ್ಲ. ಇದೂ ಕೂಡ ಜಿಲ್ಲೆಯಲ್ಲಿ ಘೋಷಿತ ಹಲವು ಯೋಜನೆಗಳು ಕಾಲಗಟ್ಟಲೆ ನೆನೆಗುದಿಗೆ ಬಿದ್ದಿರುವಂತೆಯೇ ಆಗಿದೆ.

ಯಾವ ಯಾವ ಗ್ರಾಮ, ಹೋಬಳಿಗಳನ್ನು ಹೊಸ ತಾಲೂಕಿಗೆ ಸೇರಿಸಬಹುದು ಎಂಬ ವರದಿಯನ್ನು ಕೇಳಲಾಗಿದೆಯೇ ವಿನಹಃ ಇದರ ಅಧಿಕೃತೆಯ ನಿಟ್ಟಿನಲ್ಲಿ ಇನ್ನೂ ಪ್ರಯತ್ನ ಜರುಗಿಲ್ಲ. ಈ ನಡುವೆ ಸೋಮವಾರಪೇಟೆ ತಾಲೂಕಿಗೆ ಒಳಪಟ್ಟಿರುವ ಚೆಟ್ಟಳ್ಳಿಯನ್ನು ಕುಶಾಲನಗರದ ಬದಲಾಗಿ ಮಡಿಕೇರಿ ತಾಲೂಕಿಗೆ ಸೇರಿಸಬೇಕು, ಪ್ರಸ್ತುತ ಮಡಿಕೇರಿ ತಾಲೂಕಿಗೆ ಒಳಪಟ್ಟಿರುವ ಅರಪಟ್ಟು, ಹೊದವಾಡ, ಕರಡ ಗ್ರಾಮಗಳನ್ನು ಸನಿಹದ ವೀರಾಜಪೇಟೆ ತಾಲೂಕಿಗೆ ಸೇರಿಸಬೇಕು ಎಂಬಿತ್ಯಾದಿ ಬೇಡಿಕೆಗಳೂ ಜನ ಸಾಮಾನ್ಯರಿಂದ ಕೇಳಿಬರುತ್ತಿವೆ.

ಹಾಲಿ ವೀರಾಜಪೇಟೆ ತಾಲೂಕಿಗೆ ವೀರಾಜಪೇಟೆ ಹಾಗೂ ಅಮ್ಮತ್ತಿ ಹೋಬಳಿಯ ಗ್ರಾಮಗಳ ಸೇರ್ಪಡೆ ಹಾಗೂ ನೂತನವಾಗಿ ರಚನೆಯಾಗಬೇಕಿರುವ ಪೊನ್ನಂಪೇಟೆಗೆ, ಪೊನ್ನಂಪೇಟೆ, ಬಾಳಲೆ, ಹುದಿಕೇರಿ, ಶ್ರೀಮಂಗಲ ಹೋಬಳಿ ಸೇರ್ಪಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸೋಮವಾರಪೇಟೆ ಹಾಗೂ ನೂತನ ಕುಶಾಲನಗರ ತಾಲೂಕಿಗೆ ಯಾವ ಗ್ರಾಮ - ಹೋಬಳಿ ಸೇರ್ಪಡೆಯಾಗಬೇಕೆಂಬದೂ ಇನ್ನೂ ನಿರ್ಧಾರವಾಗಿಲ್ಲ. ಇತ್ತೀಚೆಗೆ ಈ ಸಂಬಂಧವಾಗಿ ಕುಶಾಲನಗರದಲ್ಲಿ ಸಭೆಯೊಂದು ನಡೆದಿರುವದು ಹೊರತು ಪಡಿಸಿದರೆ ಇನ್ಯಾವ ಪ್ರಕ್ರಿಯೆಗಳೂ ನಡೆದಿಲ್ಲ. ಜಿಲ್ಲಾಡಳಿತದ ಮೂಲಕ ಕೆಲವೊಂದು ಪ್ರಾಥಮಿಕ ಹಂತದ ಕೆಲಸಗಳಷ್ಟೇ ಈ ತನಕ ನಡೆದಿದೆ.

ಹೋರಾಟ ಸಮಿತಿಗಳೆಲ್ಲಿ..?

ತಾಲೂಕು ರಚನೆ ವಿಚಾರವಾಗಿ ದಿನಗಟ್ಟಲೆ, ತಿಂಗಳು ಗಟ್ಟಲೆ ಹೋರಾಟ ನಡೆಸಿದ್ದ ಹೋರಾಟ ಸಮಿತಿಯವರಾಗಲಿ, ಇದರಲ್ಲಿ ಪಾಲ್ಗೊಂಡಿದ್ದ ಜನತೆಯಾಗಲಿ ಈ ವಿಚಾರದಲ್ಲಿ ಪ್ರಸ್ತುತ ಯಾವದೇ ಚರ್ಚೆ ಮಾಡುತ್ತಿಲ್ಲ. ಇವರೊಂದಿಗೆ ಜಿಲ್ಲೆಯ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಯಾವದೇ ಚಕಾರವೆತ್ತುತ್ತಿಲ್ಲ ಎಂಬದು ಗಮನಾರ್ಹವಾಗಿದೆ. ಇದೀಗ ನವೆಂಬರ್ ತಿಂಗಳು ಎದುರಾಗಿದ್ದು; ಇನ್ನೂ ಕೆಲವೇ ಸಮಯದಲ್ಲಿ ಈ ಆರ್ಥಿಕ ವರ್ಷ ಪೂರ್ಣಗೊಳ್ಳಲಿದೆ.

ಈ ಅವಧಿಯೊಳಗೆ ಘೋಷಣೆಯಾಗಿರುವ ಎರಡು ನೂತನ ತಾಲೂಕಿಗೆ ಒಂದು ಅಂತಿಮ ಸ್ವರೂಪ ದೊರೆತು ಮುಂದಿನ ಆರ್ಥಿಕ ವರ್ಷದಿಂದಾದರೂ ಇವು ಅಧಿಕೃತವಾಗಿ ಕಾರ್ಯಾರಂಭಗೊಳ್ಳುವ ನಿಟ್ಟಿನಲ್ಲಿ ಈಗಿನಿಂದಲೇ ಪ್ರಯತ್ನಗಳು ನಡೆಯಬೇಕಿದೆ. ಇಲ್ಲದಿದ್ದಲ್ಲಿ ಇನ್ನಿತರ ಯೋಜನೆಗಳಂತೆ ಇದೂ ಕೂಡ ವರ್ಷಗಟ್ಟಲೆ ಘೋಷಣೆಯಾಗಿಯೇ ಉಳಿಯುವದು ಖಚಿತ.