ಕುಶಾಲನಗರ, ನ. 11: ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪಿಯು ವಿದ್ಯಾರ್ಥಿಗಳಿಗೆ ಮಡಿಕೇರಿಯಲ್ಲಿ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಉಪನ್ಯಾಸಕರ ಸಂಘಕ್ಕೆ ಆಹ್ವಾನ ನೀಡದಿರುವ ಬಗ್ಗೆ ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಾ. 14 ರಂದು ಜಿಲ್ಲಾಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳನ್ನು ಮಡಿಕೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳನ್ನು ನಡೆಸುವ ಮುನ್ನ ಇಲಾಖೆಯ ನಿಯಮದಂತೆ ಇಲಾಖೆಯ ಉಪನಿರ್ದೇಶಕರು ಅವರ ಅಧ್ಯಕ್ಷತೆಯಲ್ಲಿ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸಿ ಸಮಾರಂಭದ ರೂಪುರೇಷೆಯನ್ನು ಸಿದ್ಧಪಡಿಸಬೇಕಾಗಿತ್ತು. ಆದರೆ ಇದನ್ನು ಮಾಡದೆ ಉಪನಿರ್ದೇಶಕರು ಹಾಗೂ ಪ್ರಾಂಶುಪಾಲರ ಸಂಘದ ಸದಸ್ಯರು ಮಾತ್ರ ತಮಗೆ ಬೇಕಾದಂತೆ ಕಾರ್ಯಕ್ರಮವನ್ನು ರೂಪಿಸಿರುವದು ಸರಿಯಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿ ಎಂಬ ಜಿಲ್ಲಾಮಟ್ಟದ ಸ್ಪರ್ಧೆಗಳನ್ನು ನಡೆಸುವಾಗ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕಾರ್ಯ ಮಾಡುತ್ತಿದೆ. ಹೀಗಿರುವಾಗ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಸಮಾರಂಭಕ್ಕೆ ಜಿಲ್ಲಾ ಉಪನ್ಯಾಸಕರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸದೇ ಇರುವದು ಮಾನ್ಯತೆ ಪಡೆದಿರುವ ಸಂಘಕ್ಕೆ ಹಾಗೂ ಉಪನ್ಯಾಸಕರಿಗೆ ಅಗೌರವ ಮಾಡಿದಂತಾಗಿದೆ ಎಂದು ಸಂಘದ ಅಧ್ಯಕ್ಷ ಫಿಲಿಪ್‍ವಾಸ್, ಪ್ರಧಾನ ಕಾರ್ಯದರ್ಶಿ ಹಂಡ್ರಂಗಿ ನಾಗರಾಜ್, ಕಾರ್ಯಾಧ್ಯಕ್ಷ ಟಿ.ಹೇಮಂತ್ ಕುಮಾರ್, ಖಜಾಂಚಿ ಸರ್ವೋತ್ತಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಈಗಾಗಲೇ ಇಲಾಖೆಯ ನಿರ್ದೇಶಕರಿಗೆ ದೂರು ನೀಡಿದ್ದು, ಉಪನಿರ್ದೇಶಕರು ತಕ್ಷಣ ಆಗಿರುವ ತಪ್ಪನ್ನು ಸರಿಪಡಿಸದಿದ್ದರೆ ಸಂಘದ ಪದಾಧಿಕಾರಿಗಳು ತಾ.13 ರಂದು ಉಪನಿರ್ದೇಶಕರ ಕಚೇರಿ ಮುಂಭಾಗ ಸಾಂಕೇತಿಕ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.