ಮಡಿಕೇರಿ, ನ. 11: ನಗರದ ಓಂಕಾರೇಶ್ವರ ದೇವಾಲಯ ರಸ್ತೆ ಬದಿ ಒಂದೊಮ್ಮೆ ಹೆಸರುವಾಸಿಯಾಗಿದ್ದ ಸಿವಿಎಸ್ ಬ್ರದರ್ಸ್ ಉದ್ದಿಮೆಯ ಸುಮಾರು 8 ಸೆಂಟು ಜಾಗದಲ್ಲಿ; ಕೊಡಗು ಜಿಲ್ಲಾ ಬಿಜೆಪಿಯ ನೂತನ ಕಾರ್ಯಾಲಯ ನಿರ್ಮಿಸಲು ತಯಾರಿ ನಡೆದಿದೆÉ. ಈ ನಿವೇಶನವನ್ನು ಕೆಲವು ವರ್ಷಗಳ ಹಿಂದೆ ಪಕ್ಷದ ಕಾರ್ಯಾಲಯಕ್ಕಾಗಿ ಬಿಜೆಪಿ ಖರೀದಿಸಿದೆ.
ಅಲ್ಲದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಶಯದಂತೆ; ಬಿಜೆಪಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸ್ವಂತ ನೆಲೆ ಹೊಂದಿರಬೇಕೆಂದು ನಿರ್ಧರಿಸಿ; ಮೂರು ವರ್ಷಗಳ ಹಿಂದೆಯೇ ನಿವೇಶನ ಹೊಂದಿದ್ದರೂ ಕಟ್ಟಡ ಕೆಲಸ ಸಾಧ್ಯವಾಗಿಲ್ಲ. ಈ ನಡುವೆ ಕರ್ನಾಟಕ ರಾಜ್ಯ ಬಿಜೆಪಿ ಮುಖಂಡರು ಪಕ್ಷದ ಕಚೇರಿ ನಿರ್ಮಾಣಕ್ಕೆ ನಿರ್ದೇಶಿಸಿರುವದಾಗಿ ತಿಳಿದು ಬಂದಿದೆ.
ಆ ದಿಸೆಯಲ್ಲಿ ಪ್ರಸಕ್ತ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿರುವ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಪ್ರಧಾನ ಕಾರ್ಯದರ್ಶಿಗಳಾಗಿರುವ ಶಾಂತೆಯಂಡ ರವಿಕುಶಾಲಪ್ಪ, ಪಳೆಯಂಡ ರಾಬಿನ್ ದೇವಯ್ಯ, ವಿ.ಕೆ. ಲೋಕೇಶ್, ನಗರ ಕಾರ್ಯದರ್ಶಿ ಕಾಳಚಂಡ ಅಪ್ಪಣ್ಣ ಅವರುಗಳನ್ನು ಒಳಗೊಂಡಿರುವ ಕಟ್ಟಡ ನಿರ್ಮಾಣ ಸಮಿತಿಯೂ ರಚನೆಗೊಂಡಿದೆ.
ಈ ಸಮಿತಿಯ ನೇತೃತ್ವದಲ್ಲಿ ಸುಮಾರು ರೂ. 1.50 ಕೋಟಿ ವೆಚ್ಚದಲ್ಲಿ, ದಾನಿಗಳಿಂದ ಮತ್ತು ಬಿಜೆಪಿಯ ಹಿರಿಯರಿಂದ ದೇಣಿಗೆ ಕ್ರೋಢೀಕರಿಸಿ ಕಚೇರಿ ನಿರ್ಮಿಸಲು ಬಿಜೆಪಿ ಪ್ರಮುಖರು ಸಿದ್ಧತೆಯಲ್ಲಿದ್ದಾರೆ. ಈ ಸಂಬಂಧ ಈಗಾಗಲೇ ಬೆಂಗಳೂರಿನ ‘ಸಿವಿಕಾನ್ ಇಂಜಿನಿಯರ್ಸ್’ ನೇತೃತ್ವದಲ್ಲಿ ಕಟ್ಟಡದ ವಿನ್ಯಾಸದೊಂದಿಗೆ ನೀಲಿ ನಕಾಶೆ ತಯಾರಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಬಹುತೇಕ ಗ್ರಾ.ಪಂ. ಹಂತದಿಂದ ಸಂಸತ್ತಿನ ತನಕ ಬಿಜೆಪಿಯು ಚುನಾಯಿತ ಪ್ರತಿನಿಧಿಗಳನ್ನು ಹೊಂದಿದ್ದು; ಪಕ್ಷ ಸಂಘಟನೆ ಬಲಿಷ್ಠವಿದ್ದರೂ; ಸುಧೀರ್ಘ ಅವಧಿಯಿಂದ ಸ್ವಂತ ಕಾರ್ಯಾಲಯ ಹೊಂದಲು ಸಾಧ್ಯವಾಗಿಲ್ಲ ಎಂಬ ಕೊರಗು ಕಾರ್ಯಕರ್ತರಿಗಿದೆ.
ಆ ದಿಸೆಯಲ್ಲಿ ಪ್ರಸಕ್ತ ಯೋಜನೆಯಡಿ ನೆಲಮಳಿಗೆ ಸಹಿತ ಎರಡು ಅಂತಸ್ತಿನ ಬಿಜೆಪಿ ಕಾರ್ಯಾಲಯ ಕಟ್ಟಬೇಕೆಂಬ ಸಂಕಲ್ಪದೊಂದಿಗೆ; ಸಂಘಟಿತ ಪ್ರಯತ್ನ ನಡೆದಿದೆ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ. ಇಲ್ಲಿ ಹಿರಿಯರ ಸೇವೆಯೊಂದಿಗೆ ಈ ಪೀಳಿಗೆಯ ಕಾರ್ಯಕರ್ತರು ಕೂಡ ಸ್ವಂತ ನೆಲೆ ಕಂಡುಕೊಳ್ಳುವಲ್ಲಿ ಕೈಜೋಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.