ಗೋಣಿಕೊಪ್ಪಲು, ನ. 11: ಕೊಡಗಿನ ವಿವಿಧ ಭಾಗದಲ್ಲಿ ಕೆಲವು ಅಧಿಕಾರಿ ವರ್ಗ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ರೈತರೊಂದಿಗೆ ವರ್ತಿಸುತ್ತಿದ್ದು, ಇದೇ ರೀತಿ ಮುಂದುವರೆದರೆ ರೈತರು ಬೀದಿಗಿಳಿದು ಹೋರಾಟ ಕೈಗೊಳ್ಳುವ ತೀರ್ಮಾನ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಎಚ್ಚರಿಸಿದರು.
ಮಾಯಮುಡಿಯ ಕಂಗಳತ್ತುನಾಡು ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ರೈತ ಸಂಘಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತ ಸಂಘದ ಸದಸ್ಯತ್ವ ಹೊಂದಿಲ್ಲದ ರೈತರ ಪರ ಹೋರಾಟಕ್ಕೂ ರೈತ ಸಂಘ ಸಿದ್ದವಿದೆ ಎಂದರು.
ಸಾಲ ಮನ್ನಾದ ವಿಚಾರದಲ್ಲಿ ಬ್ಯಾಂಕ್ಗಳು ರೈತರಿಗೆ ಸ್ಪಂದನೆ ನೀಡದಿದ್ದಲ್ಲಿ ಮುಂದಿನ ದಿನದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವದು. ಸದ್ಯದಲ್ಲಿಯೇ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ರೈತ ಮುಖಂಡರ ಸಭೆ ನಡೆಯಲಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾಳಪಂಡ ಟಿಪ್ಪು ಬಿದ್ದಪ್ಪ ರೈತರ ಆರ್ಥಿಕ ಪರಿಸ್ಥಿತಿ ಇನ್ನು ಸುಧಾರಿಸಿಲ್ಲ. 20 ವರ್ಷಗಳ ಹಿಂದೆ ಇದ್ದಂತಹ ಬೆಲೆಯೇ ಈಗಲೂ ಇದೆ ಆದರೆ ಸರ್ಕಾರಿ ನೌಕರರಿಗೆ 10 ಪಟ್ಟು ವೇತನ ಹೆಚ್ಚಾಗಿದೆ. ಇಂತಹ ತಾರತಮ್ಯ ನಿಲ್ಲಬೇಕು ಎಂದರು.
ನಲ್ಲೂರು ಗ್ರಾಮದ ಹಿರಿಯ ರೈತ ಮುಖಂಡರಾದ ಪುಚ್ಚಿಮಾಡ ಲಾಲಾ ಪೂಣಚ್ಚ ಮಾತನಾಡಿ ಎಲ್ಲ ರೈತರಿಗೂ ತಮ್ಮದೇ ಆದ ಕೆಲಸದ ಒತ್ತಡವಿದ್ದರೂ ಇದನ್ನು ಬದಿಗೊತ್ತಿ ರೈತ ಸಂಘ ನಡೆಸುವ ಹೋರಾಟಕ್ಕೆ ಕೈ ಜೋಡಿಸಬೇಕು ಜಿಲ್ಲೆಯಲ್ಲಿ ರೈತ ಸಂಘ ಅಸ್ತಿತ್ವಕ್ಕೆ ಬಂದ ನಂತರ ರೈತರ ಅನೇಕ ಸಮಸ್ಯೆಗಳು ಪರಿಹಾರ ಕಂಡಿವೆ. ಈ ನಿಟ್ಟಿನಲ್ಲಿ ರೈತ ಸಂಘದೊಂದಿಗೆ ಕೈ ಜೋಡಿಸುವದು ಅನಿವಾರ್ಯ ಎಂದರು.
ಬಿರುನಾಣಿ ಭಾಗದ ರೈತ ಮುಖಂಡ ಕರ್ತಮಾಡ ಸುಜು ಮಾತನಾಡಿ ಸದೃಢ ಸಮಾಜ ನಿರ್ಮಾಣಕ್ಕೆ ರೈತರು ಪಣ ತೊಟ್ಟಲ್ಲಿ ಮಾತ್ರ ಸಾಧ್ಯ. ರೈತಾಪಿ ವರ್ಗ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ರಾಯ್ ಮಾದಪ್ಪ, ಎಸ್.ಎಸ್. ಸುರೇಶ್, ಸೋಮೆಯಂಗಡ ಗಣೇಶ್, ಮರಿಸ್ವಾಮಿ ಮುಂತಾದವರು ಮಾತನಾಡಿದರು. ಪೊನ್ನಂಪೇಟೆ, ಬಾಳೆಲೆ ಹೋಬಳಿಯ ಧನುಗಾಲ, ರುದ್ರಬೀಡು, ಮಾಯಮುಡಿ, ಬಾಳಾಜಿ, ಗ್ರಾಮಗಳಿಂದ ಮಹಿಳೆಯರು ಸೇರಿದಂತೆ ನೂರಾರು ರೈತರು ನೂತನವಾಗಿ ರೈತ ಸಂಘಕ್ಕೆ ಸೇರ್ಪಡೆಗೊಂಡು ಪ್ರತಿಜ್ಞೆ ಸ್ವೀಕರಿಸಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಜಿ ಇಟ್ಟಿರ ಸಬಿತಾಭೀಮಯ್ಯ, ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು, ಚೆಪ್ಪುಡೀರ ರಾಧ ಅಚ್ಚಯ್ಯ, ತಾಲೂಕು ಸಂಚಾಲಕ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್ ಉಪಸ್ಥಿತರಿದ್ದರು. ಪೊನ್ನಂಪೇಟೆ, ಬಾಳೆಲೆ ಹೋಬಳಿಯ ಧನುಗಾಲ, ರುದ್ರಬೀಡು, ಮಾಯಮುಡಿ, ಬಾಳಾಜಿ, ಗ್ರಾಮದ ವಿವಿಧ ಭಾಗದ ರೈತ ಮುಖಂಡರಾದ ಮಲ್ಚೀರ ಗಿರೀಶ್, ಮಲ್ಚೀರ ಅಶೋಕ್, ತೀತರಮಾಡ ರಾಜ, ಕಾಳಪಂಡ ಗಣೇಶ್, ನಾಮದಾರಿ ಆರ್. ಪ್ರವೀಣ್, ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು. ಸುಜಯ್ ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಚ್ಚಿಮಾಡ ರಾಯ್ ಮಾದಪ್ಪ ಸ್ವಾಗತಿಸಿ, ವಂದಿಸಿದರು.