ಶ್ರೀಮಂಗಲ, ನ. 11: ಕೊಡವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ಐಯ್ಯೇಟಿರ ಮಾಲಾಕಾರ್ಯಪ್ಪ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಹತ್ತು ದಿನದಲ್ಲಿ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲು ಪೊನ್ನಂಪೇಟೆ ಕೊಡವ ಸಮಾಜ ನಿರ್ಧರಿಸಿದೆ.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್‍ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ವೀರಾಜಪೇಟೆ, ನಾಪೊಕ್ಲು, ಕುಟ್ಟ, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಒಟ್ಟು ನಾಲ್ಕು ದೂರು ಮಾಲಾ ಕಾರ್ಯಪ್ಪ ವಿರುದ್ಧ ದಾಖಲಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಭರವಸೆಯಿಂದ ಕಾನೂನು ಮೊರೆ ಹೋಗಿದ್ದೇವೆ ಹೊರತು, ಇದನ್ನೇ ನಮ್ಮ ವಿಪರ್ಯಾಸ ಎಂದು ತಿಳಿದುಕೊಂಡು ಪೊಲೀಸ್ ಇಲಾಖೆ ಮಾಲಾಕಾರ್ಯಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗದೆ ಇರುವದು ಸರಿಯಲ್ಲ ಎಂದು ಹೇಳಿದರು.

ಒಂದು ತಿಂಗಳ ಹಿಂದೆ ಐದು ಯುವಕರು ಕೊಡವ ಜನಾಂಗವನ್ನು ನಿಂದನೆ ಮಾಡಿದ್ದಾರೆ. ಈ ಬಗ್ಗೆ ಪೊನ್ನಂಪೇಟೆ ಕೊಡವ ಸಮಾಜ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಚೇರಂಬಾಣೆ ಕೊಡವ ಸಮಾಜ ಪ್ರತ್ಯೇಕವಾಗಿ ದೂರು ನೀಡಿದೆ. ಮಡಿಕೇರಿ ಡಿ.ವೈ.ಎಸ್.ಪಿ. ದಿನೇಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರು ಎರಡು ಜನಾಂಗದ ಮುಖಂಡರನ್ನು ಕರೆದು ಸೌಹಾರ್ದಯುತವಾಗಿ ಬಗೆಹರಿಸಿದ್ದರು.

ಆದರೆ ಮತ್ತೆ ಕೊಡವ ಜನಾಂಗವನ್ನು ನಿಂದನೆ ಮಾಡುವ ಪ್ರಕರಣ ಪುನರಾವರ್ತನೆ ಆಗಿದೆ. ಇವರ ವಿರುದ್ಧ ದೂರು ನೀಡಿ 20 ದಿನಕ್ಕೂ ಹೆಚ್ಚು ಆಗಿದ್ದರೂ ಅವರ ವಿರುದ್ಧ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರೋಪಿ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪೊನ್ನಂಪೇಟೆ ಕೊಡವ ಸಮಾಜ ನೇತೃತ್ವದಲ್ಲಿ ಕೊಡವ ಜನಾಂಗಕ್ಕೆ ಉಂಟಾಗಿರುವ ನಿಂದನೆ ವಿರುದ್ಧ ಕಾನೂನು ಹೋರಾಟ ದೊಂದಿಗೆ ಜನಾಂಗದ ಎಲ್ಲರನ್ನು ಸಂಘಟಿಸಿ ಬೃಹತ್ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ಚೆಪ್ಪುಡೀರ ಬೋಪಣ್ಣ್ಣ, ಗೌ. ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಶಾರದ, ಖಜಾಂಚಿ ಮೂಕಳೆರ ಲಕ್ಷ್ಮಣ, ಖಾಯಂ ಆಹ್ವಾನಿತ ನಿರ್ದೇಶಕರಾದ ಚೆಪ್ಪುಡೀರ ಕಿಟ್ಟುಅಯ್ಯಪ್ಪ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭುಪೂಣಚ್ಚ, ಮೂಕಳಮಾಡ ಅರಸು ನಂಜಪ್ಪ, ಅಡ್ಡಂಡ ಸುನೀಲ್ ಸೋಮಯ್ಯ, ಚೆಪ್ಪುಡೀರ ರಾಕೇಶ್ ದೇವಯ್ಯ, ಮಂಡಚಂಡ ದಿನೇಶ್ ಚಿಟ್ಟಿಯಪ್ಪ, ಚೆಪ್ಪುಡೀರ ರೂಪ ಉತ್ತಪ್ಪ, ಚೊಟ್ಟೇಕಾಳಪಂಡ ಆಶಾಪ್ರಕಾಶ್ ಹಾಜರಿದ್ದರು.