ಕುಶಾಲನಗರ, ನ. 11: ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ರಥೋತ್ಸವ ತಾ. 16 ರಂದು ನಡೆಯಲಿದೆ. 99ನೇ ಗೋ ಪ್ರದರ್ಶನ ಮತ್ತು ಜಾತ್ರಾ ಮಹೋತ್ಸವ ತಾ. 17 ರಿಂದ 19 ರ ತನಕ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ತಿಳಿಸಿದ್ದಾರೆ.

ಗೋ ಪ್ರದರ್ಶನದಲ್ಲಿ ರಾಸುಗಳ ಪ್ರದರ್ಶನ, ಮಾರಾಟ ಮತ್ತು ಖರೀದಿ ವಹಿವಾಟುಗಳನ್ನು ನಡೆಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಮತ್ತು ರಾಸುಗಳಿಗೆ ಮೂಲಭೂತ ಸೌಕರ್ಯಗಳಾದ ನೀರು, ನೆರಳು ಮತ್ತು ಸುರಕ್ಷತೆ ವ್ಯವಸ್ಥೆಗಳನ್ನು ದೇವಾಲಯ ವತಿಯಿಂದ ಕಲ್ಪಿಸಲಾಗುವದು ಎಂದು ಅವರು ತಿಳಿಸಿದರು.

ಗೋ ಪ್ರದರ್ಶನದ ಮೂರು ದಿನಗಳ ಕಾಲ ಪಶುಪಾಲನ ಮತ್ತು ಪಶು ವೈದ್ಯಕೀಯ ಸಿಬ್ಬಂದಿ ಸೇವೆ, ಔಷಧಿ ಹಾಗೂ ಪೌಷ್ಟಿಕಾಂಶಗಳು ಉಚಿತವಾಗಿ ಲಭ್ಯವಾಗಲಿದೆ. ಯಾವದೇ ರೋಗ ತಗುಲಿರುವ ಪ್ರಾಣಿಗಳನ್ನು ಪ್ರದರ್ಶನಕ್ಕೆ ತರುವದನ್ನು ಕಡ್ಡಾಯವಾಗಿ ನಿರ್ಭಂದಿಸಲಾಗಿದ್ದು ಉತ್ತಮ ರಾಸುಗಳು ಮತ್ತು ಸಾಕು ಪ್ರಾಣಿಗಳಿಗೆ ಬಹುಮಾನ ನೀಡಲಾಗುವದು.

ಗೋ ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಚಿಸುವ ರೈತರುಗಳು ತಮ್ಮ ರಾಸುಗಳ ವಿವರಗಳೊಂದಿಗೆ ಮೊಬೈಲ್ ಸಂಖ್ಯೆ 8951486172, 9036344104 ಸಂಖ್ಯೆಗಳಿಗೆ ಕರೆ ಮಾಡಿ ತಾ. 13 ರೊಳಗೆ ನೋಂದಾಯಿಸಿಕೊಳ್ಳಬೇಕೆಂದು ವಸಂತಕುಮಾರ್ ಕೋರಿದ್ದಾರೆ.