ಮಡಿಕೇರಿ, ನ. 11: ಮಡಿಕೇರಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕಗೊಳಿಸುವ ನಿಟ್ಟಿನಲ್ಲಿ ಕೊಡಗು ಫಾರ್ ಟುಮಾರೋ ಸಂಸ್ಥೆಯು ಕಳೆದ ಒಂದು ವಾರದಿಂದ ವಿಭಿನ್ನ ರೀತಿಯಲ್ಲಿ ಸ್ವಯಂಸೇವಕ ಕಾರ್ಯ ಕರ್ತರೊಂದಿಗೆ ಪ್ರಯತ್ನಿಸುತ್ತಿದೆ. ತಾ. 16 ರಂದು ಸ್ವಚ್ಛತಾ ಜಾಥಾವನ್ನು ಮಡಿಕೇರಿಯಲ್ಲಿ ಆಯೋಜಿಸಲಾಗಿದೆ.
ಒಟ್ಟು 15 ದಿನಗಳ ಸ್ವಚ್ಛ ಮಡಿಕೇರಿ ಸಂದೇಶದ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಕೊಡಗು ಫಾರ್ ಟುಮಾರೋ ಸಂಸ್ಥೆಗೆ ಸೇರಿದ ಹತ್ತಾರು ಸ್ವಯಂಸೇವಕರು ಮುಂಜಾನೆಯಲ್ಲಿಯೇ ನಗರಸಭೆಯ ತ್ಯಾಜ್ಯವಿಲೇವಾರಿ ಸಂಬಂಧಿತ ಟ್ರ್ಯಾಕ್ಟರ್, ಆಟೋಗಳೊಂದಿಗೆ ಸಾಗುತ್ತಾ, ಮನೆ ಮನೆಗೆ ತೆರಳಿ ತ್ಯಾಜ್ಯ ವಿಲೇವಾರಿಯನ್ನು ಯಾವ ರೀತಿಯಲ್ಲಿ ವಿಂಗಡಣೆ ಮಾಡ ಬೇಕೆಂದು ತಿಳುವಳಿಕೆ ನೀಡುತ್ತಿದ್ದಾರೆ.
ಮಡಿಕೇರಿಯ ಹಲವಾರು ಮನೆಗಳಲ್ಲಿ ತ್ಯಾಜ್ಯ ವಿಲೇವಾರಿ ಸುಸೂತ್ರವಾಗಿಸುವ ನಿಟ್ಟಿನಲ್ಲಿ ಇನ್ನೂ ತಿಳುವಳಿಕೆ ಇಲ್ಲದ ಹಿನ್ನೆಲೆ ನಗರಸಭೆಯ ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಕೊಡಗು ಫಾರ್ ಟುಮಾರೋ ವತಿಯಿಂದ ಮನೆ ಮನೆಗೂ ತೆರಳಿ, ಮನೆ ಮಂದಿಯಲ್ಲಿ ತ್ಯಾಜ್ಯವನ್ನು ಯಾವ ರೀತಿಯಲ್ಲಿ ಸರಿಯಾಗಿ ವಿಂಗಡಿಸಬೇಕು.
ವಿಂಗಡಿಸಿದ ತ್ಯಾಜ್ಯವನ್ನು ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಸಮರ್ಪಕವಾಗಿ ಯಾವ ರೀತಿ ಹಾಕಬೇಕು ಎಂಬ ಬಗ್ಗೆಯೂ ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಮಡಿಕೇರಿಯ ಸ್ವಚ್ಛತೆಯನ್ನು ಜನತೆಗೆ ಪರಿಣಾಮಕಾರಿಯಾಗಿ ತಿಳಿಸುವ ಉದ್ದೇಶದಿಂದ ಕೊಡಗು ಫಾರ್ ಟುಮಾರೋ ವತಿಯಿಂದ
ತಾ. 16ರಂದು ಬೆಳಿಗ್ಗೆ 10.30 ಗಂಟೆಯಿಂದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಹಳೇ ಖಾಸಗಿ ಬಸ್ ನಿಲ್ದಾಣದವರೆಗೆ ಶಾಲಾ ವಿದ್ಯಾರ್ಥಿಗಳು, ಎನ್.ಸಿ.ಸಿ., ಎನ್.ಎಸ್.ಎಸ್., ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರು, ಕೊಡಗು ಫಾರ್ ಟುಮಾರೋ ಮತ್ತು ಮಡಿಕೇರಿ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಆಯೋಜಿತವಾದ ಈ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.