ಮಡಿಕೇರಿ, ನ. 9: ಕೊಡವ ಸಮಾಜಗಳ ಒಕ್ಕೂಟದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಸುಮಾರು ರೂ. 5 ಕೋಟಿ ವೆಚ್ಚದ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ವೀರಾಜಪೇಟೆಯ ಬಾಳುಗೋಡು ಹಾಕಿ ಮೈದಾನದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು, ಈ ಹಿಂದಿನ ಸರ್ಕಾರ ಸ್ಟೇಡಿಯಂ ನಿರ್ಮಾಣಕ್ಕಾಗಿ ರೂ. 5 ಕೋಟಿ ಮಂಜೂರು ಮಾಡಿದ್ದು, ಮುಂದಿನ ವರ್ಷ ಮಾರ್ಚ್ ಅಂತ್ಯದೊಳಗೆ ಯೋಜನೆ ಪೂರ್ಣಗೊಳ್ಳಬೇಕಾಗಿದೆ ಎಂದರು.

ಗುಣಮಟ್ಟದ ಕಾಮಗಾರಿ ಯೊಂದಿಗೆ ಸುಸಜ್ಜಿತ ಸ್ಟೇಡಿಯಂನ್ನು ಕ್ರೀಡಾಭಿಮಾನಿಗಳಿಗೆ ಅರ್ಪಣೆ ಮಾಡುವ ಮಹತ್ತರ ಜವಬ್ದಾರಿ ನಮ್ಮ ಮೇಲಿದೆ. ಇದಕ್ಕೆ ಸರ್ವ ಪದಾಧಿಕಾರಿ ಗಳು, ಸದಸ್ಯರು ಹಾಗೂ ಸಮಾಜದ ಬಂಧುಗಳ ಸಹಕಾರದ ಅಗತ್ಯವಿದೆ ಎಂದು ಮನವಿ ಮಾಡಿದರು.

ಇದೇ ಸಂದರ್ಭ ಕೊಡವ ಸಮಾಜಗಳ ಒಕ್ಕೂಟದ ಮಾಸಿಕ ಸಭೆಯನ್ನು ಬಾಳುಗೋಡುವಿನ ಕೊಡವ ಸಮಾಜದಲ್ಲಿ ನಡೆಸಲಾ ಯಿತು. ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತ್ತಲ್ಲದೆ ಒಕ್ಕೂಟದಲ್ಲಿ ಸದಸ್ಯತ್ವವನ್ನು ಹೆಚ್ಚು ಮಾಡುವ ನಿರ್ಣಯ ಕೈಗೊಳ್ಳಲಾಯಿತು.

ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದ ಬೆಳ್ಳಿಯಪ್ಪ, ಉಪಾಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಹಾಜರಿದ್ದರು.

ಬೊಟ್ಟೋಳಂಡ ಕಾಶಿ ಪ್ರಾರ್ಥಿಸಿ, ವಾಟೇರಿರ ಶಂಕರಿ ಪೂವಯ್ಯ ವಂದಿಸಿದರು.