*ಗೋಣಿಕೊಪ್ಪಲು, ನ. 10: ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಮೂಲಕ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಭಾರತದ ಚುನಾವಣಾ ವ್ಯವಸ್ಥೆ ಮತ್ತು ಬಹುಪಕ್ಷ ಪದ್ಧತಿ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ 63 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮತದಾನ ಕುರಿತು ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿಯೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಳಿಕ ಮಾತನಾಡಿದ ಪ್ರಾಂಶುಪಾಲ ಡಾ. ಜೆ. ಸೋಮಣ್ಣ 18 ವರ್ಷ ತುಂಬಿದ ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಮತದಾನದಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ಮೂಲಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಕ್ಲಬ್ ಸದಸ್ಯ ಹಾಗೂ ಉಪನ್ಯಾಸಕ ಎನ್.ಕೆ. ಪ್ರಭು ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನದ ಮಾಡುವದು ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವದು ಅಗತ್ಯ ಎಂದು ಹೇಳಿದರು. ಉಪನ್ಯಾಸಕಿ ಪ್ರತಿಭಾ ಉತ್ತಪ್ಪ, ಶಿಕ್ಷಕರಾದ ಎಂ.ಪಿ. ರಾಘವೇಂದ್ರ, ಪಿ.ಎ. ಪ್ರಭುಕುಮಾರ್, ವಿದ್ಯಾರ್ಥಿ ನಾಯಕರಾದ ಟಿ.ಆರ್. ದಿವ್ಯಾ, ಮುತ್ತುರಾಜ್, ಸಫ್ರಿನಾ, ಮಂಜುಳಾ, ನಿಶಾ, ರಿಹಾನ, ದಮಯಂತಿ, ನಿತೀಶ್ ಕುಮಾರ್, ಯತೀಶ್, ಗಗನ್, ವಿಕಾಶ್, ಸುದೀಪ್, ಪವನ್, ಪ್ರವೀಣ್ ಹಾಜರಿದ್ದರು.