ಮಡಿಕೇರಿ, ನ. 9: ಕೋಟೆ ಆವರಣದಲ್ಲಿ ಮಳೆಗಾಲದಲ್ಲಿ ಮುರಿದು ಬಿದ್ದಿದ್ದ ಮರದ ದಿಮ್ಮಿಗಳನ್ನು ಮಡಿಕೇರಿ ರಕ್ಷಣಾ ವೇದಿಕೆ ಕಾರ್ಯಕರ್ತರು ಶ್ರಮದಾನ ಮೂಲಕ ತೆರವುಗೊಳಿಸಿದರು.

ಮಡಿಕೇರಿಯ ಅರಮನೆ ಆವರಣದಲ್ಲಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಬಲ ಭಾಗದಲ್ಲಿ ಕಳೆದ ಮಳೆಗಾಲದಲ್ಲಿ ಮರಗಳು ಮುರಿದು ಬಿದ್ದಿದ್ದು, ಅದನ್ನು ಲೋಕೋಪಯೋಗಿ ಇಲಾಖೆಯವರು ಕತ್ತರಿಸಿ ಅದೇ ಸ್ಥಳದಲ್ಲಿ ಬಿಟ್ಟು ಹೋಗಿದ್ದರು. ಇದರಿಂದ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರ, ವಕೀಲರ, ನ್ಯಾಯಾಧೀಶರ ಮತ್ತು ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನಗಳ ನಿಲುಗಡೆಗೆ ಅಡಚಣೆಯಾಗುತ್ತಿತ್ತು. ಇದನ್ನು ಗಮನಿಸಿದ ಮಡಿಕೇರಿ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶ್ರಮದಾನದ ಮೂಲಕ ತೆರವುಗೊಳಿಸಿ ಸುಲಲಿತ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟರು.

ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಉಪಾಧ್ಯಕ್ಷ ಗಜೇಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಎಂ. ಹರೀಶ್, ಕಾರ್ಯದರ್ಶಿ ಅಜಿತ್, ಖಜಾಂಚಿ ಉಮೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕರ್ಕೇರಾ, ನಿರ್ದೇಶಕ ದಿನೇಶ್, ಶ್ರೀನಿವಾಸ ರೈ, ಮಹಿಳಾ ವೇದಿಕೆಯ ಅಧ್ಯಕ್ಷೆ ರಶ್ಮಿ, ಸದಸ್ಯರಾದ ಟೀನಾ ಅರುಣ್, ತಾರಾ, ಉಷಾ ಹಾಗೂ ಫ್ಯಾನ್ಸಿ ಪಾಲ್ಗೊಂಡಿದ್ದರು.