ಮಡಿಕೇರಿ, ನ. 9: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಹೊರತರುವ ಮುಖ್ಯ ಹೊಣೆಗಾರಿಕೆ ಶಿಕ್ಷಕರು ಮತ್ತು ಪಾಲಕರದ್ದಾಗಿದೆ ಎಂದು ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಟಿ.ಕಿರಣ್ ಕಾರ್ಯಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ವಿಭಾಗ ವತಿಯಿಂದ ನಗರದ ಸಂತ ಮೈಕಲರ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ವಿಭಿನ್ನ ಕಲೆಗಳಲ್ಲಿ ಭಾಗವಹಿಸುವದರಿಂದ ಅನೇಕ ಪ್ರತಿಭೆಗಳು ಹೊರಬರುತ್ತವೆ. ಅವರಲ್ಲಿರುವ ಅಭಿರುಚಿಯನ್ನು ಗುರುತಿಸಿ, ಪ್ರತಿಭೆಯನ್ನು ಹೊರತರುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು ಎಂದು ಅವರು ಹೇಳಿದರು.
ತಾ.ಪಂ. ಅಧ್ಯಕ್ಷ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ವೇದಿಕೆಯಾಗಿದೆ. ಅವಕಾಶಗಳು ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ಉತ್ತಮವಾದ ಕಲೆ, ಸ್ಪರ್ಧೆಗಳನ್ನು ಏರ್ಪಡಿಸಿ, ವಿದ್ಯಾರ್ಥಿಗಳಲ್ಲಿರುವ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮೂಲಕ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪೆರಿಗ್ರೀನ್ ಎಸ್.ಮಚ್ಚಾಡೋ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆಯಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುತ್ತಾ ಬೇರೆಯವರ ಪ್ರತಿಭೆಯನ್ನು ಗೌರವಿಸಬೇಕು ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಕೆಂಚಪ್ಪ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಸೋಲು - ಗೆಲವು ಮುಖ್ಯವಲ್ಲ. ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸುವದು ಮುಖ್ಯ. ಸೋಲು- ಗೆಲವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಕೋರಿದರು.
ಸಂತ ಮೈಕಲರ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ನವೀನ್ ಕುಮಾರ್ ಮಾತನಾಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸ್ಪರ್ಧಾತ್ಮಕ ಯುಗದಲ್ಲಿ ಬೆಳೆಯುತ್ತಿರುವ ಮಕ್ಕಳ ಪ್ರತಿಭೆಯನ್ನು ಪ್ರಶಂಸಿಸುವ ಕಾರ್ಯವಾಗಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಇದು ಕಲಿಕಾ ದಿನವಾಗಿದೆ. ವಿದ್ಯಾರ್ಥಿಗಳು ಬೇರೆ ಶಾಲೆಯ ವಿದ್ಯಾರ್ಥಿಗಳೊಂದಿಗೆ ಬೆರೆಯಲು ಈ ಕಾರ್ಯಕ್ರಮವು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಉಮಾಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ, ಮಂಜೇಶ, ಶ್ರೀಶೈಲ ಬಿಳಗಿ, ಪ್ರೌಢ ಕರಾಪ್ರೌಶಾಸಶಿ ಸಂಘದ ಅಧ್ಯಕ್ಷ ಎನ್.ಕೆ. ಮೆಹಬೂಬ್ ಸಾಬ್, ಅನುದಾನಿತ ಪ್ರೌಶಾಸಶಿ. ಸಂಘದ ಅಧ್ಯಕ್ಷ ವಿಲ್ಫ್ರೇಡ್ ಕ್ರಾಸ್ತಾ, ಪ್ರೌಶಾಸಶಿ. ಸಂಘದ ಅಧ್ಯಕ್ಷ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್, ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇತರರು ಇದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೋ ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಯು. ರಂಜಿತ್ ನಿರೂಪಿಸಿದರು. ಶಿಕ್ಷಣ ಅಧಿಕಾರಿ ಕಾಶೀನಾಥ್ ವಂದಿಸಿದರು.