ಕುಶಾಲನಗರ, ನ. 10: ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಚುನಾಯಿತ ಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗೂಡಿ ಕಾರ್ಯನಿರ್ವಹಿಸುವದರೊಂದಿಗೆ ನಾಗರಿಕರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.
ಅವರು ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಪಂಚಾಯಿತಿ ಪ್ರತಿನಿಧಿಗಳು ಮತ್ತು ಪಕ್ಷದ ಪ್ರಮುಖರೊಂದಿಗೆ ಪಟ್ಟಣದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಮುಖ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿಗಳ ಗಮನಕ್ಕೆ ತರಲಾಗುವದು ಎಂದರಲ್ಲದೆ, ಸ್ಥಳೀಯ ಆಡಳಿತ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಸರಕಾರ ದೊಂದಿಗೆ ಚರ್ಚಿಸಲಾಗುವದು ಎಂದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರು, ಬಿಜೆಪಿ ಮುಖಂಡರು ಕುಶಾಲನಗರ ಪಟ್ಟಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರ ಗಮನ ಸೆಳೆದು ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಲಂಚಗುಳಿತನ ತಾಂಡವವಾಡುತ್ತಿದ್ದು ಬ್ರೋಕರ್‍ಗಳ ಹಾವಳಿ ಮಿತಿಮೀರಿದೆ. ಜಾಗದ ಖಾತೆ ಬದಲಾವಣೆ ಮತ್ತಿತರ ತಾಂತ್ರಿಕ ತೊಂದರೆಗಳಿರುವ ಬಡಾವಣೆಗಳ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ತಡೆ ನೀಡಿದರೂ ಸಹ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೇಕಾಬಿಟ್ಟಿ ಅನುಮತಿ ನೀಡುತ್ತಿರುವ ಬಗ್ಗೆ ದೂರಿದರು. ಅಧಿಕಾರಿಗಳು ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿ ತಮ್ಮದೇ ಹಾದಿಯಲ್ಲಿ ಆಡಳಿತ ನಡೆಸುತಿದ್ದು ನಾಗರಿಕರು ಸಮಸ್ಯೆಯ ಸುಳಿಗೆ ಸಿಲುಕುತ್ತಿದ್ದಾರೆ ಎಂದು ಅಮೃತ್‍ರಾಜ್ ಮತ್ತು ಬಿಜೆಪಿ ಹಿರಿಯ ಮುಖಂಡ ಜಿ.ಎಲ್. ನಾಗರಾಜ್ ಆರೋಪ ವ್ಯಕ್ತಪಡಿಸಿದರು.
ಪಂಚಾಯಿತಿಗೆ ಬರುವ ಆದಾಯದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಮೂಲಭೂತ ಸಮಸ್ಯೆಗಳಿಗೆ ಮೀಸಲಿಡಬೇಕಾದ ಆದಾಯ ಮೂಲವನ್ನು ಕಟ್ಟಡಕ್ಕೆ ಬಳಸಿಕೊಳ್ಳುತ್ತಿರುವದರೊಂದಿಗೆ ಇನ್ನಿತರ ಅಭಿವೃದ್ದಿ ಕಾರ್ಯ ಕುಂಠಿತ ಗೊಳ್ಳಲಿದೆ ಎಂದು ಅಮೃತ್‍ರಾಜ್ ಆತಂಕ ವ್ಯಕ್ತಪಡಿಸಿದರು.
ಬಡವರಿಗೆ ಗುಂಪು ಮನೆ ನಿರ್ಮಾಣ ಯೋಜನೆಗೆ ಗುಂಡೂರಾವ್ ಜಾತ್ರೆ ಮೈದಾನವನ್ನು ಗುರುತಿಸಲಾಗಿದೆ. ಈಗಾಗಲೇ ನಿಗದಿಯಾಗಿದ್ದ ಮಾರುಕಟ್ಟೆ ವ್ಯಾಪ್ತಿಯಲ್ಲಿ ಕಲ್ಲು ಬಂಡೆಗಳ ನೆಪವೊಡ್ಡಿ ಗುಂಡೂರಾವ್ ಬಡಾವಣೆ ಯಲ್ಲಿ ಯೋಜನೆ ಜಾರಿಗೊಳಿಸಲು ಡಿಪಿಆರ್ ಸಿದ್ದಪಡಿಸಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ, ಆಟದ ಮೈದಾನಕ್ಕೆ ಸೂಕ್ತವಾಗಿರುವ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಗುಂಪು ಮನೆಗಳ ನಿರ್ಮಾಣವಾದಲ್ಲಿ ಮುಂದಿನ ದಿನಗಳಲ್ಲಿ ಅನಾನುಕೂಲ ಉಂಟಾಗಲಿದೆ ಎಂದು ಜಿ.ಎಲ್. ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಖಾತೆ ಬದಲಾವಣೆ ಸಂಬಂಧ ಸಕಾಲದಲ್ಲಿ ಕೆಲಸಗಳು ಆಗುತ್ತಿಲ್ಲ. ಸಿಬ್ಬಂದಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಇ-ಸ್ವತ್ತು ಖಾತೆ ಬದಲಾವಣೆ ಸಂಬಂಧ ಅದಾಲತ್ ನಡೆಸಲು ಕ್ರಮಕೈಗೊಳ್ಳಬೇಕಿದೆ ಎಂದು ಸದಸ್ಯ ವಿ.ಎಸ್. ಆನಂದಕುಮಾರ್ ಕೋರಿಕೆ ಮಂಡಿಸಿದರು.
ಸದಸ್ಯ ಜಯವರ್ಧನ ಮಾತನಾಡಿ, ಟೌನ್ ಕಾಲೋನಿಯಲ್ಲಿ ನಿರ್ಮಿಸಿರುವ ಕಾಂಕ್ರಿಟ್ ರಸ್ತೆ ಸುಗಮ ಸಂಚಾರಕ್ಕೆ ತೀವ್ರ ಅನಾನುಕೂಲ ಉಂಟುಮಾಡಿದೆ. ಕಿರಿದಾದ ರಸ್ತೆಯ ಎರಡೂ ಬದಿ ಸ್ಲಾಬ್ ನಿರ್ಮಿಸಿ ಅಗಲೀಕರಣಗೊಳಿಸಬೇಕು. ಇಲ್ಲದಿದ್ದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಿದಲ್ಲಿ ಮಾತ್ರ ಸಮಸ್ಯೆ ಬಗೆಹರಿಯಲಿದೆ ಎಂದರು.
ಸದಸ್ಯ ಶೇಖ್ ಖಲೀಮುಲ್ಲಾ ಮಾತನಾಡಿ, ಮಾರುಕಟ್ಟೆ ರಸ್ತೆಯೊಂದ ರಲ್ಲಿಯೇ ಹಲವು ಬಾರ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಸಂಜೆ ವೇಳೆ ಮಹಿಳೆಯರು, ವಯೋವೃದ್ಧರು ಸಂಚರಿಸಲು ತೊಂದರೆ ಉಂಟಾ ಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಈ ಸಂದರ್ಭ ಪಂಚಾಯ್ತಿ ಸದಸ್ಯರಾದ ರೂಪಾ ಉಮಾಶಂಕರ್, ಸುಂದರೇಶ್, ರೇಣುಕಾ, ಬಿಜೆಪಿಯ ಪ್ರಮುಖರಾದ ಎಂ.ಡಿ. ಕೃಷ್ಣಪ್ಪ ಇದ್ದರು.