ಸೋಮವಾರಪೇಟೆ, ನ.9: ವಿಭಜಿತ ಸೋಮವಾರಪೇಟೆ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗಕ್ಕೆ ಮನವಿ ಸಲ್ಲಿಸುವದು; ಸಮರ್ಪಕ ಸ್ಪಂದನೆ ಲಭಿಸದಿದ್ದಲ್ಲಿ ಹೋರಾಟ ಸಂಘಟಿಸುವ ಬಗ್ಗೆ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸಮಿತಿಯ ಅಧ್ಯಕ್ಷ ಅಭಿಮನ್ಯು ಕುಮಾರ್ ಅಧ್ಯಕ್ಷತೆಯಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸ ಲಾಯಿತು. ತಾಲೂಕಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರ ಗಮನ ಸೆಳೆದು, ಪಕ್ಷಾತೀತವಾಗಿ ಹೋರಾಟ ನಡೆಸುವ ಬಗ್ಗೆ ಸಭೆಯಲ್ಲಿದ್ದವರು ಸಲಹೆ ನೀಡಿದರು.

ತಾ. 11ರಂದು ಸೋಮವಾರ ಪೇಟೆ ಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರನ್ನು ಭೇಟಿ ಮಾಡಿ ಸಮಿತಿಯ ವತಿಯಿಂದ ಮನವಿ ಸಲ್ಲಿಸುವದ ರೊಂದಿಗೆ, ಅವರ ಕಚೇರಿಯಲ್ಲಿಯೇ ಸಭೆ ನಡೆಸಿ ಬೇಡಿಕೆಗಳ ಪಟ್ಟಿ ಮುಂದಿಡುವದು; ನಂತರ ತಾಲೂಕು ತಹಶೀಲ್ದಾರ್‍ರನ್ನು ಭೇಟಿಯಾಗಿ ಚರ್ಚಿಸುವಂತೆ ಸಭೆಯಲ್ಲಿ ತೀರ್ಮಾನಿ ಸಲಾಯಿತು.

ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಶಾಂತಳ್ಳಿ ಹೋಬಳಿಗಳನ್ನು ಒಳಗೊಂಡಂತೆ ಕುಶಾಲನಗರದಿಂದ ವಿಭಜನೆಗೊಂಡಿರುವ ಸೋಮವಾg Àಪೇಟೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಪ್ರಮುಖರನ್ನು ಸಮಿತಿಯಲ್ಲಿ ಸೇರ್ಪಡೆಗೊಳಿಸುವದು, ಉಳಿಕೆಯಾಗಿರುವ ತಾಲೂಕಿಗೆ ಒಳಪಡುವ ಜಿ.ಪಂ., ತಾ.ಪಂ. ಸದಸ್ಯರನ್ನು ಆಹ್ವಾನಿಸಿ ಸಮಗ್ರ ನೀಲನಕ್ಷೆ ತಯಾರಿಸಿ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು.

ವಿಭಜಿತ ಕುಶಾಲನಗರ ತಾಲೂಕು ರಚನೆ ಸಂದರ್ಭ ಸೋಮವಾರಪೇಟೆ ಭಾಗದವರ ಅಭಿಪ್ರಾಯಗಳನ್ನು ಸಂಗ್ರಹಿಸಿಲ್ಲ. ಕೆಲವೊಂದು ಗ್ರಾಮ ಪಂಚಾಯಿತಿಗಳ ಕೆಲವು ಗ್ರಾಮಗಳನ್ನು ಕುಶಾಲನಗರಕ್ಕೆ ಏಕಪಕ್ಷೀಯವಾಗಿ ಸೇರಿಸಲಾಗಿದೆ. ಈ ಹಿನ್ನೆಲೆ ತಕ್ಷಣ ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳ ಗಮನ ಸೆಳೆದು, ಸಮಿತಿಯ ಅಭಿಪ್ರಾಯವನ್ನೂ ಸಂಗ್ರಹಿಸಿ ಮುಂದಿನ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಮೊದಲಿಗೆ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಗಡಿಗಳನ್ನು ಗುರುತಿಸಿ, ಸಂಘ ಸಂಸ್ಥೆಗಳು, ಸ್ಥಳೀಯರು ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ನಂತರ ವಿಭಜಿಸಬೇಕು. ಮಾದಾಪುರ, ಹರದೂರು, ಐಗೂರು, ನೇರುಗಳಲೆ, ಗಣಗೂರು ಗ್ರಾಮ ಪಂಚಾಯಿತಿಗಳ ಗ್ರಾಮಗಳನ್ನು ಕುಶಾಲನಗರಕ್ಕೆ ಸೇರಿಸಿದರೆ ಹೋರಾಟದ ಹಾದಿ ಹಿಡಿಯುವದು ಅನಿವಾರ್ಯ ವಾಗಲಿದೆ ಎಂದು ಸಮಿತಿಯ ಅಧ್ಯಕ್ಷ ಅಭಿಮನ್ಯುಕುಮಾರ್ ಹೇಳಿದರು.

ಸುಂಟಿಕೊಪ್ಪ ವಿಭಜಿತ ಮಾದಾಪುರ, ಹರದೂರು ಮತ್ತು ಗರ್ವಾಲೆ ಗ್ರಾ.ಪಂ.ಗಳನ್ನು ಒಗ್ಗೂಡಿಸಿ ಮಾದಾಪುರ ಹೋಬಳಿಯನ್ನು ರಚಿಸಬೇಕು. ಹಾಸನ- ಮಡಿಕೇರಿ ಹೆದ್ದಾರಿ, ಸುಬ್ರಮಣ್ಯ- ಸೋಮವಾರಪೇಟೆ ಹೆದ್ದಾರಿ, ಕೆ.ಆರ್.ಪೇಟೆ- ಬಾಣಾವರ ಹೆದ್ದಾರಿ ಸೇರಿದಂತೆ ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳನ್ನು ತುರ್ತು ಮೇಲ್ದರ್ಜೆಗೇರಿಸ ಬೇಕು. ಸೋಮವಾರಪೇಟೆ ಪಟ್ಟಣ ಪಂಚಾಯಿತಿಯನ್ನು ನಗರಸಭೆಯ ನ್ನಾಗಿ ಪರಿವರ್ತನೆ ಮಾಡಬೇಕು. ಶನಿವಾರಸಂತೆಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆ ಗೇರಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ತೀರ್ಮಾನಿಸಲಾಯಿತು.

ತಾಲೂಕಿನಲ್ಲಿ ಮೊರಾರ್ಜಿ ಶಾಲೆ, ಪಶುವೈದ್ಯಕೀಯ ಮತ್ತು ಮೀನುಗಾರಿಕೆ ಕಾಲೇಜು, ಆಯುಷ್, ಆಯುರ್ವೇದಿಕ್, ಹೋಮಿಯೋಪತಿ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ಸ್ನಾತಕ್ಕೋತ್ತರ ಕಾಲೇಜು, ತಾಂತ್ರಿಕ ಕಾಲೇಜು, ಕೃಷಿ, ಪಾಲಿಟೆಕ್ನಿಕ್ ಕಾಲೇಜುಗಳನ್ನು ಸ್ಥಾಪಿಸಲು ಕ್ರಮವಹಿಸಬೇಕೆಂದು ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಕೈಗಾರಿಕೋದ್ಯಮ ಮತ್ತು ವಾಣಿಜ್ಯೋದ್ಯಮ, ಕೃಷಿ, ಸರ್ಕಾರಿ ಕಚೇರಿಗಳ ಉನ್ನತೀಕರಣ, ನೂತನ ಕಚೇರಿಗಳ ಪ್ರಾರಂಭ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವದು, ಆರ್‍ಟಿಓ ಉಪ ಕಚೇರಿ ಸ್ಥಾಪನೆ, ತಾಲೂಕು ಕಚೇರಿಗಳ ಸಮುಚ್ಚಯ ಭವನ ನಿರ್ಮಾಣ, ಸಿವಿಲ್ ಕೋರ್ಟ್ ಕಟ್ಟಡ ನಿರ್ಮಾಣ, ಅಪರ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ ನಿರ್ಮಾಣ, ಹರದೂರು, ಕುಂಬೂರು, ಮಾದಾಪುರ, ಗರ್ವಾಲೆ ವ್ಯಾಪ್ತಿಯ ಆಸ್ತಿ ನೊಂದಣಿಗಳನ್ನು ಸೋಮ ವಾರಪೇಟೆಗೆ ವರ್ಗಾಯಿಸುವದು, ಪ್ರವಾಸೋದ್ಯಮ ಅಭಿವೃದ್ಧಿ, ಹೈನುಗಾರಿಕೆಗೆ ಒತ್ತು, ಬಸ್‍ಗಳ ವ್ಯವಸ್ಥೆ, ಉದ್ಯಾನವನಗಳ ನಿರ್ಮಾಣ, ಕಾಫಿ ಮತ್ತು ಪೆಪ್ಪರ್ ಪಾರ್ಕ್ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕೆಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು.

ಗರ್ವಾಲೆಯನ್ನು ಮಾದಾಪುರ ಹೋಬಳಿಗೆ ಸೇರ್ಪಡೆಗೊಳಿಸಬೇಕು ಎಂದು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಹೇಳಿದರು. ತಾಲೂಕಿನ ಅಭಿವೃದ್ಧಿಗೆ ಜಾತ್ಯಾತೀತ ಮತ್ತು ಪಕ್ಷಾತೀತ ಹೋರಾಟ ಅಗತ್ಯವಿದೆ ಎಂದು ಮಾಜೀ ಎಂಎಲ್‍ಸಿ ಎಸ್.ಜಿ. ಮೇದಪ್ಪ ಸಲಹೆ ನೀಡಿದರು. ಪ್ರವಾಸೋದ್ಯಮಕ್ಕೆ ಪೂರಕವೆಂಬಂತೆ ತಾಲೂಕಿನ ಗಡಿ ರಸ್ತೆಗಳಲ್ಲಿ ಫಲಕಗಳನ್ನು ಅಳವಡಿಸಬೇಕೆಂದು ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‍ನ ಆದರ್ಶ್ ಸಲಹೆ ನೀಡಿದರು.

ರಾಜ್ಯ ಹೆದ್ದಾರಿಗಳ ನಿರ್ಮಾಣ ಆದರೆ ಮಾತ್ರ ಅಭಿವೃದ್ಧಿ ನಿರೀಕ್ಷಿಸಬಹುದು. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಲಿಂಕ್ ರಸ್ತೆಗಳ ನಿರ್ಮಾಣವಾಗಬೇಕು ಎಂದು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ಸಲಹೆಯಿತ್ತರು.

ಬಜೆಗುಂಡಿಯ ಪ್ರಶಾಂತ್, ಶಿರಂಗಳ್ಳಿಯ ಸಚಿನ್, ಜನಾರ್ಧನ್, ಮನುಕುಮಾರ್ ರೈ, ಕಿಬ್ಬೆಟ್ಟ ಮಧು ಸೇರಿದಂತೆ ಇತರರು ಉಪಯುಕ್ತ ಸಲಹೆ ನೀಡಿದರು.

ಸಕಲೇಶಪುರದ ಹೊಸೂರು, ಉಚ್ಚಂಗಿ, ಚಂಗಡಹಳ್ಳಿ, ವಣಗೂರು ಗ್ರಾ.ಪಂ.ಗಳನ್ನು ಸೋಮವಾರಪೇಟೆಗೆ ಸೇರಿಸಲು ಸಮಿತಿಯ ಮೂಲಕ ಒತ್ತಾಯಿಸಬೇಕೆಂದು ಅಲ್ಲಿನ ಹೋರಾಟ ಸಮಿತಿ ಪ್ರಮುಖರಾದ ಕೃಷ್ಣೇಗೌಡ, ಲಕ್ಷ್ಮಣ್ ಸೇರಿದಂತೆ ಇತರರು ಮನವಿ ಮಾಡಿದರು. ಈ ಬಗ್ಗೆ ಶಾಸಕರು ಮತ್ತು ಮುಖ್ಯಮಂತ್ರಿ ಗಳನ್ನು ಭೇಟಿಯಾಗಲು ನಿರ್ಧರಿಸಲಾಯಿತು.

ಸಭೆಯಲ್ಲಿ ಸಮಿತಿಯ ಸಂಚಾಲಕ ಎಸ್. ಮಹೇಶ್, ಪ್ರಮುಖರಾದ ಎಸ್.ಎಂ. ಡಿಸಿಲ್ವಾ, ಬಿ.ಬಿ. ಸತೀಶ್, ಕೆ.ಎ. ಯಾಕೂಬ್, ಎಸ್.ಎ. ಮುರುಳೀಧರ್, ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ, ಸಮಿತಿಯ ಕಾರ್ಯದರ್ಶಿ ಕೆ.ಎನ್. ದೀಪಕ್, ಪದಾಧಿಕಾರಿಗಳಾದ ಅಭಿಷೇಕ್, ಅಶ್ವಿನಿ ಕೃಷ್ಣಕಾಂತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.