ವೀರಾಜಪೇಟೆ, ನ. 10: ಮನುಜ ಕುಲದಲ್ಲಿ ಸೇವೆಗೆ ವಿವಿಧ ರೀತಿಯಲ್ಲಿ ಅರ್ಥವನ್ನು ಕಲ್ಪಿಸಲಾಗಿದೆ. ಮೌಲ್ಯಯುತವಾದ ಸೇವೆಗೆ ಜೀವನ ಶೈಲಿ ಮುಡಿಪಾಗಬೇಕು ಎಂದು ಇಂಡಿಯನ್ ಸೀನಿಯರ್ ಚೆಂಬರ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಅಜೀತ್ ಮೆನನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಗೊಣಿಕೊಪ್ಪಲುವಿನ ಚಿನ್ನ ಮತ್ತು ಬೆಳ್ಳಿ ವರ್ತಕರ ಸಂಘದ ಸ್ವರ್ಣ ಭವನದಲ್ಲಿ ಇಂಡಿಯನ್ ಸೀನಿಯರ್ ಚೇಂಬರ್ ಸಂಸ್ಥೆ ಗೊಣಿಕೊಪ್ಪಲು ಶಾಖೆ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ಅಜೀತ್ ಮೆನನ್, ಸಮಾಜದಲ್ಲಿ ವಯೋವೃದ್ಧರು ತಮ್ಮ ಜೀವನ ಶೈಲಿಗೆ ಅನುಗುಣವಾಗಿ ಸೇವೆಯನ್ನು ಮಾಡತಕ್ಕದ್ದು. ಇಂದು ಸಮಾಜದಲ್ಲಿ ಮೌಲ್ಯಯುತವಾದ ಸಂಬಂಧಗಳು ಮರೆಯಾಗುತ್ತಿದೆ. ಪರರೊಂದಿಗೆ ಸಂಬಂಧಗಳು ಬೆಸೆಯಲು ಅನುಕೂಲವಾದ ವಾತಾವರಣವನ್ನು ಸಂಸ್ಥೆಯು ಕಲ್ಪಿಸಿಕೊಟ್ಟಿದೆ. ಸದಸ್ಯರು ಸದುಪಯೋಗ ಪಡೆದುಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.

ರಾಷ್ಟ್ರೀಯ ಕಾರ್ಯದರ್ಶಿ ಬಾಬುರಾಜ್ ನಂಬಿಶನ್ ಮಾತನಾಡಿ, ಸಂಸ್ಥೆಯ ಭದ್ರ ಭುನಾದಿ ಸಂಸ್ಥೆಯ ಸದಸ್ಯರು. ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಸಂಸ್ಥೆಯ ಶಾಖೆಯು ಗೊಣಿಕೊಪ್ಪಲುವಿನಲ್ಲಿ ಉದಯವಾಯಿತು.

ಇಂದು ಕರ್ನಾಟಕದಲ್ಲಿ ಒಟ್ಟು 13 ಶಾಖೆಗಳು ಕಾರ್ಯ ನಿರ್ವಹಿಸುತಿದೆ. ಈ ಎಲ್ಲಾ ಶಾಖೆಗಳಿಗೆ ಗೋಣಿಕೊಪ್ಪಲು ಶಾಖೆಯು ಮಾತೃ ಶಾಖೆಯಾಗಿದೆ. ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಹಮ್ಮಿಕೊಂಡು ಸಮಾಜಕ್ಕೆ ಮಾದರಿಯಾಗುವಂತೆ ಶುಭ ಹಾರೈಸಿದರು.

ಇಂಡಿಯನ್ ಸೀನಿಯರ್ ಚೇಂಬರ್ ಸಂಸ್ಥೆ ಗೊಣಿಕೊಪ್ಪಲು ಶಾಖೆಯ ಅಧ್ಯಕ್ಷ ಮನ್ನಕಮನೆ ಬಾಲಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಮೊಕಳೇರ ದಿಲ್‍ಕುಮಾರ್ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ವೇದಿಕೆಯಲ್ಲಿ ಇಂಡಿಯನ್ ಸೀನಿಯರ್ ಚೇಂಬರ್ ಸಂಸ್ಥೆ ರಾಷ್ಟ್ರೀಯ ಉಪಾಧ್ಯಕ್ಷ ಬಾನು ಪ್ರಕಾಶ್, ಸಂಸ್ಥೆಯ ಖಜಾಂಚಿ ಮಂಡೇಪಂಡ ಸಚಿನ್, ನಿರ್ಗಮಿತ ಅಧ್ಯಕ್ಷ ಕಿರಣ್ ಪೊನ್ನಪ್ಪ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಸ್ವಾಗತಿಸಿ, ಕಾರ್ಯದರ್ಶಿ ದಿಲ್ ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮಹಿಳೆಯರು ಹಾಜರಿದ್ದರು. - ಕೆ.ಕೆ.ಎಸ್.