ಅದು ಕ್ರಿ.ಶ. 571 ಏಪ್ರಿಲ್ 21 (ರಬೀವುಲ್ ಅವ್ವಲ್) ಅರೇಬಿಯಾ ಮಣ್ಣಿನಲ್ಲಿ ಜನರ ಮಧ್ಯೆ ಕದನ ನಡೆಯುತ್ತಿದ್ದ ಕಾಲವದು. ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರಗಳು ವ್ಯಾಪಕವಾಗಿದ್ದ ಕಾಲವಾಗಿತ್ತು.

ಹೆಣ್ಣು ಮಗು ಹುಟ್ಟಿತೆಂದರೆ ಅಪಶಕುನವಾಗಿದೆ ಎಂದು ತಿಳಿಯುವ ಕಾಲ. ಇಂತಹ ಸಂದರ್ಭದಲ್ಲಿ ಪವಿತ್ರ ಮೆಕ್ಕಾದ ಮಣ್ಣಲ್ಲಿ ಅಬ್ದುಲ್ಲಾ ಹಾಗೂ ಅಮಿನಾ ದಂಪತಿಗಳ ಸುಪುತ್ರನಾಗಿ ಜನಿಸಿದ ಆ ದಿವ್ಯಚೇತನವೇ ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ (ಸ.ಅ).

ಹುಟ್ಟಿನಿಂದಲೇ ತಂದೆಯನ್ನು ಕಳೆದುಕೊಂಡಿದ್ದ ಪ್ರವಾದಿಯವರಿಗೆ ಆರು ವರ್ಷ ಪ್ರಾಯವಾದಾಗ ತಾಯಿ ಅಮೀನಾ ಇಹಲೋಕ ತ್ಯಜಿಸಿದರು. ಒಟ್ಟಾರೆಯಾಗಿ ತಾನು ಎಂಟು ವರ್ಷ ಪ್ರಾಯದವನಾಗಿರುವ ಬಾಲ್ಯವಸ್ಥೆಯಲ್ಲೇ ಪ್ರವಾದಿಯವರು ತನ್ನ ಪೋಷಕರೆಲ್ಲರನ್ನು ಕಳೆದುಕೊಂಡರು. ಇದರಿಂದಾಗಿಯೇ ಪ್ರವಾದಿಯವರಿಗೆ ಅನಾಥವಸ್ಥೆ, ನೋವು, ಸಂಕಷ್ಟಗಳನ್ನು ಜೀವನದಲ್ಲಿ ಎದುರಿಸಬೇಕಾಯಿತು.

ತನ್ನ ಯವ್ವನಾವಸ್ಥೆಗೆ ಬಂದಾಗ ಪ್ರವಾದಿಯವರು ಕೆಲಕಾಲ ಕುರಿ ಮೇಯಿಸುವ ಕೆಲಸದ ನಂತರ ವ್ಯಾಪಾರದಲ್ಲಿ ತೊಡಗಿಕೊಂಡರು. ವ್ಯಾಪಾರದಲ್ಲಿ ಅವರು ತೋರುತ್ತಿದ್ದ ಸತ್ಯ, ಪ್ರಾಮಾಣಿಕತೆಯಿಂದಾಗಿ ಇಡೀ ಅರಬ್ ಪ್ರದೇಶಗಳಲ್ಲಿ ಪ್ರಖ್ಯಾತರಾದರು.

ಪ್ರವಾದಿಯವರು ಸರಳಜೀವಿ ಆಗಿದ್ದರು. ದುರಾಭಿಮಾನ ಹಾಗೂ ಒಣಪ್ರತಿಷ್ಠೆಯಿಂದ ದೂರವಿದ್ದರು. ಸಮಾಜದ ದುರ್ಬಲರು, ವಿಧವೆಯರು, ನಿರ್ಗತಿಕರು ಹಾಗೂ ಅನಾಥರಿಗೆ ಅನುಕಂಪದೊಂದಿಗೆ ಸಹಾಯಹಸ್ತ ಚಾಚುತ್ತಿದ್ದರು. ಹಿರಿಯರಿಗೆ ಪ್ರತ್ಯೇಕವಾದ ಗೌರವ ಕೊಡುವದರೊಂದಿಗೆ ಕಿರಿಯರ ಮೇಲೆ ವಿಶಿಷ್ಟ ಮಮತೆಯನ್ನು ತೋರುತ್ತಿದ್ದರು.

ಪ್ರವಾದಿತ್ವಕ್ಕಿಂತ ಮುಂಚೆಯೂ ಅನೇಕ ಕಷ್ಟಗಳನ್ನು ಎದುರಿಸಿದ ಪ್ರವಾದಿಯವರಿಗೆ ಪ್ರವಾದಿತ್ವದ ನಂತರ ಕೂಡ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಇಸ್ಲಾಂ ಧರ್ಮದ ಸಾರವನ್ನು ಜನರಿಗೆ ತಿಳಿಸಲು ಮುಂದಾದಾಗ ಬಹಳ ವಿರೋಧ ಎದುರಾಯಿತು. ತಾಯಿಫ್ ಜನರಿಂದ ಕಲ್ಲಿನೇಟು ತಿನ್ನಬೇಕಾಯಿತು. ಮೆಕ್ಕಾದ ಕೆಲವರು ಪ್ರವಾದಿ ಯವರನ್ನು ಕೊಲ್ಲಲು ಹೊಂಚು ಹಾಕುತ್ತಿದ್ದರು. ಇಷ್ಟು ಸಂಕಷ್ಟಗಳನ್ನು ಎದುರಿಸಿದರೂ ಯಾರಿಗೂ ಕೇಡು ಬಗೆದು ಪ್ರಾರ್ಥಿಸಿದವರಲ್ಲ ಪ್ರವಾದಿ ಯವರು. ತನಗೆ ಕಲ್ಲೆಸೆದವರಿಗೆ ಹಾಗೂ ಕೇಡು ಬಗೆದವರಿಗೆ ಕ್ಷಮಾಪಣೆಗಾಗಿ ಸರ್ವಶಕ್ತನಾದ ಅಲ್ಲಾಹನಲ್ಲಿ ಸದಾ ಪ್ರಾರ್ಥಿಸುತ್ತಿದ್ದರು.

ಲೋಕಾನುಗ್ರಹಿತನಾಗಿ ಸೃಷ್ಟಿಸಲ್ಪಟ್ಟ “ರಹ್ಮತುಲ್ ಲಿಲ್ ಆಲಮೀನ್” ಆಗಿದ್ದಾರೆ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರು. ಇಂತಹ ಜಗತ್ತು ಕಂಡ ಶ್ರೇಷ್ಠನಾಯಕ, ಸಹೃದಯಿ ಸಜ್ಜನಿಕೆಯ ವ್ಯಕ್ತಿತ್ವದ ಪ್ರವಾದಿ ಮುಹಮ್ಮದ್ (ಸ.ಅ). ಅವರ ಜನ್ಮದಿನವಾಗಿದೆ ಇಂದು.

ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಲೋಕಕ್ಕೆ ಅನುಗ್ರಹವಾಗಿ ರಬೀವುಲ್ ಅವ್ವಲ್ ತಿಂಗಳನ್ನು ನಾವು ಅಪಾರ ಗೌರವದಿಂದ ಆಧರಿಸುವದು, ಪ್ರವಾದಿ ಮೇಲಿರುವ ಪ್ರೀತಿಯನ್ನು ಪ್ರಕಟಿಸುವದು ಪ್ರವಾದಿಯವರ ಮೇಲೆ ಸ್ವಲಾತ್ ವರ್ಧಿಸುವದು ನಮ್ಮ ಕರ್ತವ್ಯವಾಗಿದೆ. ಆದರೆ ಈ ಫ್ಯಾಶನ್ ಯುಗದಲ್ಲಿ ನಮ್ಮ ಪ್ರವಾದಿ ಪ್ರೇಮವು ಕೇವಲ ಅವರ ಜನ್ಮದಿನ ಆಚರಿಸುವದಕ್ಕೆ ಮಾತ್ರ ಸೀಮಿತವಾಗದಿರಲಿ. ಆ ದಿನದಂದು ಕೈಯಲ್ಲಿ ಪತಾಕೆ ಹಿಡಿದು ನಾಲ್ಕು ಸ್ವಲಾತ್ ಹೇಳಿದ ತಕ್ಷಣ ನಾವು ಪ್ರವಾದಿ ಪ್ರೇಮಿಗಳಾಗಲು ಸಾಧ್ಯವಿಲ್ಲ.

ಪ್ರವಾದಿಯವರ ನೈಜ ಅನುಯಾಯಿಗಳಾಗಬೇಕಾದರೆ ನಾವು ಅವರನ್ನು ಜೀವನದ ಪ್ರತಿಯೊಂದು ಹಂತದಲ್ಲಿಯೂ ಅನುಸರಿಸಬೇಕಾಗುತ್ತದೆ. ಸದಾ ಅವರ ಮೇಲೆ ಸ್ವಲಾತ್ ವರ್ಧಿಸುವದು, ಸರ್ವಧರ್ಮದವರನ್ನು ಸಹೋದರರಾಗಿ ಕಾಣುವದು, ದುರ್ಬಲರಿಗೆ ನೆರವು ನೀಡುವದು, ನಿರ್ಗತಿಕರಿಗೆ ಸಹಾಯ ಮಾಡುವದು, ಹಿರಿಯರನ್ನು ಗೌರವಿಸುವದು ಕಿರಿಯರನ್ನು ಪ್ರೀತಿಯಿಂದ ಕಾಣುವದು ಪ್ರವಾದಿಯವರ ಜೀವನ ಆಚಾರ-ವಿಚಾರಗಳಲ್ಲಿ ಸೇರಿದ್ದಾಗಿದೆ.

ಒಂದು ದಿನ, ಒಂದು ತಿಂಗಳಿಗೆ ಸೀಮಿತವಾಗದಿರಲಿ ನಮ್ಮ ಪ್ರವಾದಿ ಪ್ರೇಮ. ಎಲ್ಲರಿಗೂ ಜಗತ್ತು ಕಂಡ ಶ್ರೇಷ್ಠ ನಾಯಕ, ತನ್ನ ಒಂದು ಭಾವಚಿತ್ರವಿಲ್ಲದೇ ಇಡೀ ಜಗತ್ತಿನ ಜನರ ಮನದಾಳದಲ್ಲಿ ಹಚ್ಚ ಹಸಿರಾಗಿ ಉಳಿದ ಮೊಹಮ್ಮದ್ ಪೈಗಂಬರ್ (ಸ.ಅ) ಅವರ 1494ನೇ ಜನ್ಮದಿನದ ಶುಭಾಶಯಗಳು

- ಕೆ.ಎಂ ಇಸ್ಮಾಯಿಲ್ ಕಂಡಕರೆ