ಗೋಣಿಕೊಪ್ಪಲು, ನ. 10: ಈ ಬಾರಿಯ ನೆರೆ ಹಾವಳಿಯಿಂದ ನಷ್ಟ ಸಂಭವಿಸಿದ ರೈತರಿಗೆ ಪರಿಹಾರ ನೀಡುವ ನೆಪದಲ್ಲಿ ರೈತರ ದಾಖಲಾತಿಗಳ ಮಾಹಿತಿ ಸಂಗ್ರಹಿಸಲು ಆಗಮಿಸಿದ ಕೆಲವು ಯುವಕ, ಯುವತಿಯರನ್ನು ವಿಚಾರಣೆಗೆ ಒಳಪಡಿಸಿ ಕುಟ್ಟ ಪೊಲೀಸರಿಗೆ ಒಪ್ಪಿಸಿದ ಘಟನೆ ಶ್ರೀಮಂಗಲದಿಂದ ವರದಿಯಾಗಿದೆ. ಹೊರ ರಾಜ್ಯ ಹಾಗೂ ಜಿಲ್ಲೆಯ ಹತ್ತಾರು ಯುವಕ, ಯುವತಿಯರು ಶ್ರೀಮಂಗಲ ಹೋಬಳಿಯ ಕುರ್ಚಿ, ಬೀರುಗ, ಕುಟ್ಟ, ಪೂಜೆಕಲ್ಲು, ನೆಮ್ಮಲೆ ಗ್ರಾಮದ ಕಾಫಿತೋಟಗಳಿಗೆ ಬಾಡಿಗೆ ಜೀಪ್ನಲ್ಲಿ ಆಗಮಿಸಿ ಕೆಲವು ಗ್ರಾಮದಲ್ಲಿರುವ ರೈತರ ಮಾಹಿತಿಗಳನ್ನು ಸಂಗ್ರಹಿಸುತಿದ್ದರು.
ಈ ಬಗ್ಗೆ ಅನುಮಾನಗೊಂಡ ಕುರ್ಚಿ ಗ್ರಾಮದ ರೈತ ಮುಖಂಡ ಅಜ್ಜಮಾಡ ಚಂಗಪ್ಪ ಇವರ ಪೂರ್ವ, ಪರ ವಿಚಾರಿಸಿದಾಗ ಗಲಿಬಿಲಿಗೊಂಡ ಈ ತಂಡ ರೈತರ ಮಾಹಿತಿ ಸಂಗ್ರಹಿಸಲು ದೂರದ ಜಿಲ್ಲೆಯಿಂದ ಬಂದಿರುವ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಿತು. ರೈತರ ಮಾಹಿತಿ ಸಂಗ್ರಹಿಸಲು ಜಿಲ್ಲಾಡಳಿತ ನೀಡಿರುವ ಅನುಮತಿ ಎಲ್ಲಿ ಎಂದು ಪ್ರಶ್ನಿಸಿದಾಗ ಇವರ ಬಳಿ ಉತ್ತರವಿರಲಿಲ್ಲ. ಈ ತಂಡವು ರೈತ ಕುಟುಂಬದ ಮನೆ ವ್ಯವಹಾರ, ಜನಸಂಖ್ಯೆ, ಆದಾಯ, ಎಷ್ಟು ವರ್ಷಗಳಿಂದ ವಾಸಿಸುತ್ತಿರುವ ಬಗ್ಗೆ ಮತ್ತು ಅಸ್ತಿಗಳ ಪೂರ್ಣ ಮಾಹಿತಿಯನ್ನು ನೀಡುವಂತೆ ಒತ್ತಾಯಪಡಿಸುತಿತ್ತು. ಈ ತಂಡದವರು ಒಬ್ಬೊಬ್ಬರಾಗಿಯೇ ಗುರುತು ಪರಿಚಯವಿಲ್ಲದ ಕಾಫಿ ತೋಟಗಳಿಗೆ ನಡೆದುಕೊಂಡೆ ಹೋಗುತಿದ್ದರು.
ಗ್ರಾಮದಲ್ಲಿ ನಡೆದು ಅನಧಿಕೃತವಾಗಿ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದ ಇವರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದರು.
ಈ ತಂಡವು ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ ಎಂಬ ಸಂಸ್ಥೆಯಿಂದ ಬಂದಿರುವದಾಗಿ ಹೇಳಿಕೊಳ್ಳುತ್ತಾ, ರೈತರು ಮತ್ತು ವನ್ಯಪ್ರಾಣಿಗಳ ಸಂಘರ್ಷದ ಬಗ್ಗೆ ವರದಿ ಮಾಡಿ ರೈತರಿಗೆ ಕೂಡಲೆ ಪರಿಹಾರ ಒದಗಿಸಲು ಬಂದಿರುವದಾಗಿ ಸಬೂಬು ಹೇಳಿ ಜಾರಿಕೊಳ್ಳುವ ಪ್ರಯತ್ನ ನಡೆಸಿತು.
ಎನ್ಜಿಓಗಳು ರೈತರ, ಬೆಳೆಗಾರರ ಸರ್ವೆನಡೆಸಿ ಪರಿಹಾರ ನೀಡಿರುವದು ಇಲ್ಲಿಯತನಕ ಎಲ್ಲೂ ವರದಿಯಾಗಿಲ್ಲ. ಪ್ರಾಣಿಗಳ ಬಗ್ಗೆ ಅಧ್ಯಯನ ನಡೆಸಲು ಅರಣ್ಯಕ್ಕೆ ತೆರಳಿ ನೀವುಗಳು ಎನ್ಜಿಓ ಮೂಲಕ ಸುಳ್ಳು ಮಾಹಿತಿಯನ್ನು ಪಡೆದು ಇಲ್ಲಿನ ಗ್ರಾಮದ ಜನರನ್ನು ಒಕ್ಕಲೆಬ್ಬಿಸಿ ರೈತರಿಗೆ ಕಿರುಕುಳ ನೀಡುವ ಸಲುವಾಗಿ ಈ ರೀತಿಯ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದೀರಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಸಂಬಂಧ ಪಟ್ಟ ಇಲಾಖೆಯನ್ನು ಸಂಪರ್ಕಿಸಿ ಅಧಿಕಾರಿಗಳಿಂದ ಮಾಹಿತಿ ಬಯಸಿದಾಗ ಜಿಲ್ಲಾಧಿಕಾರಿಗಳಿಂದ, ಪೊಲೀಸ್ ಅಧಿಕಾರಿಗಳಿಂದ ಇಂತಹ ವರದಿ ಸಂಗ್ರಹಿಸಲು ಅನುಮತಿ ನೀಡಿಲ್ಲ ಎಂಬ ಮಾಹಿತಿ ನೀಡಿದರು.
ಈ ತಂಡವು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಸ್ವೀಕೃತಿ ಪತ್ರವನ್ನು ಜಿಲ್ಲಾಧಿಕಾರಿ ಆದೇಶ ಎಂದು ರೈತರಿಗೆ ಸುಳ್ಳು ಹೇಳುತ್ತಾ ರೈತರಿಂದ ಒತ್ತಾಯಪೂರ್ವಕ ಮಾಹಿತಿ ಪಡೆಯುವ ಪ್ರಯತ್ನ ಮಾಡುತಿತ್ತು.
ಸ್ಥಳದಿಂದ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ರೈತರು ಮಾಹಿತಿ ಬಯಸಿದಾಗ ಆಗಮಿಸಿದ ತಂಡ ಯಾವದೇ ಸರಕಾರದ ಸಂಸ್ಥೆಯಲ್ಲ ಮತ್ತು ನಮಗೆ ಸರಕಾರದಿಂದ ಅನುಮತಿ ನೀಡಲು ಯಾವದೇ ಆದೇಶವು ಬಂದಿಲ್ಲ. ಇದು ಕೇವಲ ಎನ್ಜಿಓ ಸಂಸ್ಥೆಯಾಗಿದೆ. ಇವರಿಗೆ ರೈತರ ಸರ್ವೆ ನಡೆಸಲು ನಾವು ಅನುಮತಿ ನೀಡಿಲ್ಲ ಹಾಗೂ ನೀಡಲು ಬರುವದಿಲ್ಲ ಇವರು ಗ್ರಾಮದಲ್ಲಿ ಯಾವದೇ ಚಟುವಟಿಕೆ ನಡೆಸಲು ಗ್ರಾಮ ಪಂಚಾಯತಿಯಿಂದ ಮತ್ತು ಸ್ಥಳೀಯ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಮಾಹಿತಿ ನೀಡಿದರು.
ಈ ತಂಡವು ರೈತರ ಮಾಹಿತಿಯನ್ನು ಮೊಬೈಲ್ನಲ್ಲಿ ಆನ್ಲೈನ್ ಮೂಲಕ ಸಂಸ್ಥೆಯ ವೆಬ್ಸೈಟ್ಗೆ ನಮೂದಿಸುವಾಗ ಶ್ರೀಮಂಗಲ ಹೋಬಳಿ ಬ್ರಹ್ಮಗಿರಿ ಅರಣ್ಯ ವಲಯಕ್ಕೆ ಸೇರಿದೆ. ಕುರ್ಚಿ, ಬೀರುಗ ಗ್ರಾಮಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಗ್ರಾಮವೆಂದು ನಮೂದಿಸುತ್ತಿದ್ದದು ಕಂಡು ಬಂದಿದೆ. ಕಳೆದ 15 ದಿನಗಳಿಂದ ಜಿಲ್ಲೆಯ ಗಡಿಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಹಲವು ಗ್ರಾಮಗಳಿಗೆ ತೆರಳಿ ಈ ತಂಡ ಮಾಹಿತಿ ಪಡೆದಿದೆ ಎಂದು ಹೇಳಲಾಗುತ್ತಿದೆ.
ವಿಚಾರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಸದಸ್ಯರಾದ ಅಜ್ಜಮಾಡ ಬೋಪಣ್ಣ, ಅಜ್ಜಮಾಡ ನಂಜಪ್ಪ, ಅಜ್ಜಮಾಡ ಚಿಮ್ಮ ತಿಮ್ಮಯ್ಯ, ಅಜ್ಜಮಾಡ ಪ್ರೆಮ ಬೋಪಣ್ಣ, ಅಜ್ಜಮಾಡ ಪೂಣಚ್ಚ, ಅಜ್ಜಮಾಡ ಮೋಹನ್, ಮಾಣೀರ ಮಧು, ಐಯ್ಯಮಾಡ ಉಮೇಶ್, ಕಿರಣ್, ಚಕ್ಕೇರ ಮಂಜು, ಅಜ್ಜಮಾಡ ದರ್ಶನ್ ಮತ್ತು ಇತರ ಗ್ರಾಮಸ್ಥರು ಉಪಸ್ಥಿತರಿದ್ದರು. ಪೊಲೀಸ್ ಇಲಾಖೆಯ ವಸಂತ್ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಇವರನ್ನು ಎಚ್ಚರಿಕೆ ನೀಡಿ ಪೊಲೀಸ್ ಠಾಣೆಗೆ ಕಳುಹಿಸಲಾಯಿತು. -ಹೆಚ್.ಕೆ. ಜಗದೀಶ್