ವರದಿ: ಚಂದ್ರಮೋಹನ್

ಕುಶಾಲನಗರ, ನ. 10: ಜೀವನದಿ ಕಾವೇರಿಗೆ ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಗುವ ಮಹಾ ಆರತಿಗೆ ಇದೀಗ 100ರ ಸಂಭ್ರಮ. 9 ವರ್ಷಗಳ ಹಿಂದೆ ಕುಶಾಲನಗರ ದಲ್ಲಿ ಕಾವೇರಿ ಮಹಾ ಆರತಿ ಬಳಗ ನೇತೃತ್ವದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್ ಮತ್ತು ಸ್ಥಳೀಯ ಸಂಘಸಂಸ್ಥೆಗಳ ಸಹಯೋಗ ದೊಂದಿಗೆ ಪ್ರಾರಂಭಗೊಂಡ ಆರತಿ ಬೆಳಗುವ ಕಾರ್ಯಕ್ರಮದ ಮೂಲಕ ನದಿಯ ಸಂರಕ್ಷಣೆ ಮತ್ತು ಪಾವಿತ್ರ್ಯತೆ ಬಗ್ಗೆ ಜನತೆಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ನದಿ ತಟದ ಸ್ನಾನಘಟ್ಟದಲ್ಲಿ ಪ್ರತಿ ತಿಂಗಳ ಹುಣ್ಣಿಮೆ ದಿನದಂದು ಸಂಜೆ ಭಜನಾ ಕಾರ್ಯಕ್ರಮ ನಂತರ ಅಷ್ಟೋತ್ತರ ಪೂಜಾ ವಿಧಿವಿಧಾನಗ ಳೊಂದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಗುತ್ತಿದೆ.

ಉತ್ತರದಲ್ಲಿ ಗಂಗಾ ನದಿಗೆ ಪ್ರತಿ ದಿನ ಆರತಿ ಕಾರ್ಯಕ್ರಮ ಜರುಗು ತ್ತಿದ್ದು ಇಂತಹ ಧಾರ್ಮಿಕ ಕಾರ್ಯ ಕ್ರಮದ ಮೂಲಕ ಕಲುಷಿತಗೊಳ್ಳುತ್ತಿ ರುವ ನದಿಯ ಸಂರಕ್ಷಣೆ ಸಾಧ್ಯ ಎನ್ನುವ ಆಶಯದೊಂದಿಗೆ ದಕ್ಷಿಣ ಭಾರತದ ಸಾಧುಸಂತರ ಸಂಘದ ಪ್ರಮುಖರಾದ ಶ್ರೀರಂಗಪಟ್ಟಣದ ಶ್ರೀ ಗಣೇಶ ಸ್ವರೂಪಾನಂದ ಸ್ವಾಮೀಜಿ, ತಮಿಳುನಾಡಿನ ಶ್ರೀ ರಮಾನಂದ ಸ್ವಾಮೀಜಿ ಅವರ ಸೂಚನೆಯಂತೆ ಕುಶಾಲನಗರದಲ್ಲಿ ಕಾವೇರಿ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮತ್ತಿತರರ ನೇತೃತ್ವದಲ್ಲಿ 2011 ಅಕ್ಟೋಬರ್ ತಿಂಗಳ ಹುಣ್ಣಿಮೆಯಂದು ಪ್ರಾರಂಭಗೊಂಡು ಇದೀಗ 100ರ ಮಹಾ ಆರತಿ ಸಂಭ್ರಮದಲ್ಲಿದೆ.

ತಲಕಾವೇರಿಯಿಂದ ಆರಂಭ ಗೊಳ್ಳುವ ಜೀವನದಿ ಮೂಲದಲ್ಲಿಯೇ ಹಲವು ಕಾರಣಗಳಿಂದ ಕಲುಷಿತ ಗೊಳ್ಳುತ್ತಿದ್ದು ತನ್ನ ಪಾವಿತ್ರ್ಯತೆಯನ್ನು ಕೂಡ ಕಳೆದುಕೊಳ್ಳುವ ಪ್ರಮೇಯ ಎದುರಾಗುತ್ತಿರುವದು ಕಂಡು ಸಾಧುಸಂತರು ಈ ನಡುವೆ ನದಿಯ ಉಳಿವು ಮತ್ತು ಸಂರಕ್ಷಣೆಯೊಂದಿಗೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುರಿ ಹೊತ್ತು ಕಳೆದ 9 ವರ್ಷಗಳಿಂದ ತಲಕಾವೇರಿಯಿಂದ ಪೂಂಪ್‍ಹಾರ್ ತನಕ ತುಲಾ ಸಂಕ್ರಮಣ ಸಂದರ್ಭ ಯಾತ್ರೆ ಹಮ್ಮಿಕೊಂಡು ನದಿ ಪಾತ್ರದ ಜನತೆಗೆ ಜೀವನದಿಯ ಸಂರಕ್ಷಣೆ ಹಾಗೂ ಪಾವಿತ್ರ್ಯತೆ ಉಳಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ನದಿ ಸಂರಕ್ಷಣೆಗೆ ರಾಜ್ಯದಲ್ಲಿ ಕಾನೂನು ರೂಪಿಸುವ ನಿಟ್ಟಿನಲ್ಲಿ ಸರಕಾರಗಳು ಕಾರ್ಯೋನ್ಮುಖವಾಗ ಬೇಕಾಗಿದೆ. ಆ ಮೂಲಕ ಮಾತ್ರ ಜಲಮೂಲಗಳ ರಕ್ಷಣೆ ಮತ್ತು ಕಾವೇರಿ ನದಿ ತಟಗಳ ಅಭಿವೃದ್ಧಿ ಕೈಗೊಂಡಲ್ಲಿ ಸ್ವಚ್ಛ ಕಾವೇರಿ ಗುರಿ ಮುಟ್ಟಲು ಸಾಧ್ಯ ಎನ್ನುವದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಅವರ ಅಭಿಪ್ರಾಯವಾಗಿದೆ.

2016ರಲ್ಲಿ ಶ್ರೀ ರಮಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಾಧುಸಂತರು, ಕಾರ್ಯಕರ್ತರು ಸೇರಿದಂತೆ 15 ಮಂದಿಯ ತಂಡ ತಲಕಾವೇರಿ ಕ್ಷೇತ್ರದಿಂದ ಪೂಂಪ್ ಹಾರ್ ತನಕ ಪಾದಯಾತ್ರೆ ಕೈಗೊಂಡು ನದಿಯ ವಾಸ್ತವಾಂಶವನ್ನು ಅರಿಯುವ ಪ್ರಯತ್ನ ಕೂಡ ನಡೆಯಿತು. ನಂತರ ಉತ್ತರದ ಗಂಗೆಯನ್ನು ಅಭಿವೃದ್ಧಿಪಡಿ ಸುತ್ತಿರುವ ಕೇಂದ್ರದ ನಮಾಮಿ ಗಂಗೆ ಯೋಜನೆಯಂತೆ ದಕ್ಷಿಣದ ಕಾವೇರಿಯ ಅಭಿವೃದ್ಧಿಗೆ ನಮಾಮಿ ಕಾವೇರಿ ಯೋಜನೆ ರೂಪಿಸುವಂತೆ ರಾಜ್ಯ, ಕೇಂದ್ರ ಸರಕಾರಗಳಿಗೆ ಆಗ್ರಹಿಸಲಾಗಿದೆ. ಅಲ್ಲದೆ ಮೂಲ ಕಾವೇರಿ ವ್ಯಾಪ್ತಿಯ ಜನರ ಸಂಕಷ್ಟ ನಿವಾರಣೆಗೆ ಶಾಶ್ವತ ಯೋಜನೆ ರೂಪಿಸಲು ಕೇಂದ್ರದಿಂದ ಅನುದಾನ ಕೂಡ ಕೋರಲಾಗಿದೆ.

ತಲಕಾವೇರಿಯಲ್ಲಿ ತೀರ್ಥವಾಗಿ ಹೊರಬರುವ ಕಾವೇರಿ ಜಲ ಸನಿಹದ ಭಾಗಮಂಡಲದಲ್ಲಿ ನದಿ ನೀರು ನೇರವಾಗಿ ಬಳಕೆಗೆ ಯೋಗ್ಯವಲ್ಲದಿರು ವದು ಆತಂಕದ ವಿಷಯ ಎನ್ನುತ್ತಾರೆ ಮಹಾ ಆರತಿ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತಿರುವ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ.

ನದಿಯನ್ನು ಭೋಗ ವಸ್ತುವಾಗಿ ಬಳಸುವಂತಿಲ್ಲ. ಅದನ್ನು ತಾಯಿಯಂತೆ ಗೌರವಿಸಬೇಕು. ಆ ಮೂಲಕ ನದಿಯ ಸಂರಕ್ಷಣೆಯಾಗ ಬೇಕಿದೆ ಎನ್ನುತ್ತಾರೆ ಸ್ವಾಮೀಜಿ.

ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಬಿ ಗುಣಮಟ್ಟದಿಂದ ಸಿ ಗುಣಮಟ್ಟದಲ್ಲಿ ಹರಿಯುತ್ತಿದ್ದ ಕಾವೇರಿ ನೀರು ಮತ್ತೆ ಬಿ ಗುಣಮಟ್ಟಕ್ಕೆ ಮರಳಿದ್ದು ಇದು ಆಶಾದಾಯಕ ಅಂಶವಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಜಿಲ್ಲಾ ಪ್ರಾದೇಶಿಕ ಅಧಿಕಾರಿ ಜಿ. ಗಣೇಶನ್ ಅವರ ಮಾಹಿತಿ ನೀಡುತ್ತಾರೆ.

ಇದೇ ತಾ. 12 ರಂದು 100ನೇ ಆರತಿ ಕಾರ್ಯಕ್ರಮ ನಡೆಯಲಿದ್ದು, ಈ ಸಂಬಂಧ ತಾ. 29 ಮತ್ತು 30 ರಂದು ಕಾವೇರಿ ನದಿ ಹಬ್ಬ-2019 ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಈ ಎರಡು ದಿನಗಳ ಕಾರ್ಯಕ್ರಮ ದಲ್ಲಿ ಶಾಲಾ-ಕಾಲೇಜು ಮಕ್ಕಳು, ಮಹಿಳೆಯರು, ಸಾಧುಸಂತರು ಪಾಲ್ಗೊಳ್ಳಲಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ನದಿ, ಜಲಮೂಲಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

100 ಕಾರ್ಯಕ್ರಮಗಳ ಚಟುವಟಿಕೆಗಳನ್ನು ಮತ್ತು ನದಿಯ ಇತಿಹಾಸವನ್ನು ಹೊತ್ತ ‘ನಮಾಮಿ ಕಾವೇರಿ’ ವಿಶೇಷ ಸಂಚಿಕೆ ಯೊಂದನ್ನು ಇದೇ ಸಂದರ್ಭ ಹೊರತರಲಾಗುತ್ತಿದ್ದು, ನಾಡಿನ ಮಠಾಧೀಶರು, ಸಾಧುಸಂತರು, ತಜ್ಞರು, ಗಣ್ಯರು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವರು.