ಪೊನ್ನಂಪೇಟೆ, ನ. 8: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ತಾ. 7 ರಂದು ಮುಂಜಾನೆ 4 ಗಂಟೆಯಿಂದ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಅನಧಿಕೃತವಾಗಿ ಕಸ ಎಸೆಯುವ ಸಾರ್ವಜನಿಕರನ್ನು ಪತ್ತೆಹಚ್ಚಿ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷೆ ಮೂಕಳೇರ ಜಿ. ಸುಮಿತ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್.ಜೆ. ಪುಟ್ಟರಾಜು ಮತ್ತು ಸಿಬ್ಬಂದಿಗಳ ತಂಡ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಗಸ್ತು ತಿರುಗುವ ಮೂಲಕ ಎಲ್ಲೆಂದರಲ್ಲಿ ವಿಲೇವಾರಿ ಮಾಡದೆ ಹಸಿ ಮತ್ತು ಒಣ ಕಸಗಳಾಗಿ ಮೂಲದಿಂದಲೇ ವಿಂಗಡಿಸಿ ಗ್ರಾಮ ಪಂಚಾಯಿತಿ ಕಸ ಸಾಗಿಸುವ ವಾಹನಕ್ಕೆ ಮಾತ್ರ ನೀಡುವಂತೆ ತಿಳಿಹೇಳಿ ಮುಂದಿನ ದಿನಗಳಲ್ಲಿ ಇದೇ ರೀತಿ ಪುನಾರಾವರ್ತನೆಯಾದಲ್ಲಿ ತಪ್ಪಿತಸ್ಥರಿಗೆ ದಂಡ ವಿಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವದಾಗಿ ತಿಳಿಸಲಾಯಿತು. ಹಾಗೆಯೇ ಕ್ರೀಡಾ ವಸತಿ ಶಾಲೆ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲಾಯಿತು.
ಈ ಹಿಂದೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ವತಿಯಿಂದ ಕರಪತ್ರಗಳ ಮೂಲಕ, ವಿಶೇಷ ಸಭೆ, ಜಾಥಾಗಳ ಮೂಲಕ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಿದ್ದರೂ ಸಹ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗ್ರಾಮವನ್ನು ಸ್ವಚ್ಛವಾಗಿಡುವದು ಗ್ರಾಮ ಪಂಚಾಯಿತಿಯ ಜವಾಬ್ದಾರಿಯಷ್ಟೇ. ಅಲ್ಲದೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯವಾಗಿದ್ದು, ಪೊನ್ನಂಪೇಟೆಯನ್ನು ಸ್ವಚ್ಛ, ಕಸಮುಕ್ತ ಗ್ರಾಮವನ್ನಾಗಿಸುವ ಪ್ರಯತ್ನದಲ್ಲಿ ಸರ್ವ ನಾಗರಿಕರು ಕೈಜೋಡಿಸಿ ಸಹಕರಿಸುವಂತೆ ಗ್ರಾಮ ಪಂಚಾಯಿತಿ ಪ್ರಕಟಣೆ ಕೋರಿದೆ.