ವೀರಾಜಪೇಟೆ, ನ. 8 : ಕಳೆದ ಐದು ವರ್ಷಗಳ ಹಿಂದೆ ವೀರಾಜ ಪೇಟೆಯ ಗಡಿ ಯಾರ ಕಂಬದ ಬಳಿಯ ಹೊಟೇಲ್‍ನಲ್ಲಿ ನಡೆದ ಮೈತಾಡಿ ಗ್ರಾಮದ ಬಳಿಯ ಚಾಮಿಯಾಲ್‍ನ ನಿವಾಸಿ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಇಕ್ಬಾಲ್‍ಹಸನ್ (40) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಇಲ್ಲಿನ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಚಾಮಿಯಾಲ್ ಗ್ರಾಮದ ಕುವೇಲರ ಯು ಅನೀಶ್ (23) ಕುವಲೇರ ಎ.ಮೂಸನ್ (46) ಹಾಗೂ ಪುದಿಯಾಣೆ ಎಂ. ನಜೀರ್ (36) ಎಂಬ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ. 50,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನಾಲ್ಕನೇ ಆರೋಪಿ ಕುವಲೇರ ಎಚ್. ಅಜಿಮುದ್ದೀನ್ (29) ಆರೋಪದಿಂದ ಬಿಡುಗಡೆಗೊಳಿಸಲಾಗಿದೆ. ಕೊಲೆ ಮಾಡಲು ಕೋವಿ ನೀಡಿದ ಕುವೇಲೇರ ಎ ಉಸ್ಮಾನ್ (59) ಎಂಬವರಿಗೆ ಮೂರು ವರ್ಷ ಸಜೆ ವಿಧಿಸಿ ತೀರ್ಪು ನೀಡಲಾಗಿದೆ.

ಕಳೆದ ತಾ. 17-9-2014ರಂದು ಇಕ್ಬಾಲ್ ಹಸನ್ ಅವರು ಅಪರಾಹ್ನ 2-50 ರ ಸಮಯದಲ್ಲಿ ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಸಂಗಮ್ ಹೊಟೇಲ್‍ನಲ್ಲಿ ಊಟ ಮುಗಿಸಿ ಕೈ ತೊಳೆದು ಹೊರ ಬರುತ್ತಿದ್ದಾಗ ಹೊಟೇಲ್‍ನ ಆವರಣ ದಲ್ಲಿದ್ದ ಅನೀಶ್ ಕೋವಿ ಯಿಂದ ಎದೆ ಹಾಗೂ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿದಾಗ ಅಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದರು. ಇಕ್ಬಾಲ್ ಹಸನ್ ಬಿದ್ದ ತಕ್ಷಣ ಕೊಲೆ ಮಾಡಿದ ಅನೀಶ್ ಹಾಗೂ ಇತರ ಮೂವರು ತಾವು ಬಂದಿದ್ದ ಕಾರಿನೊಂದಿಗೆ ಪರಾರಿ ಯಾಗಿದ್ದರು. ಇಕ್ಬಾಲ್ ಹಸನ್‍ಗೆ ಗುಂಡು ಹಾರಿಸುವ ಸಮಯದಲ್ಲಿ ಅದೇ ಹೊಟೇಲ್‍ಗೆ ಊಟಕ್ಕೆ ಬಂದು ಕೈ ತೊಳೆಯುತ್ತಿದ್ದ ಇಲ್ಲಿನ ಶಿವಕೇರಿಯ ಎಂ.ಚಂದ್ರಶೇಖರನ ಕಾಲಿಗೂ ಗುಂಡೇಟಿನಿಂದ ಗಾಯವಾಗಿತ್ತು. ಪ್ರಕರಣ ನಡೆದ ಮೂರು ವರ್ಷಗಳ (ಮೊದಲ ಪುಟದಿಂದ) ನಂತರ ಆತ ಮೃತಪಟ್ಟಿರುವದಾಗಿ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರಿಂದ ಪ್ರಕರಣಕ್ಕೆ ನೇರ ಸಾಕ್ಷಿಯಾಗಿದ್ದ ಆತನನ್ನು ಸಾಕ್ಷಿಯಿಂದ ಕೈ ಬಿಡಲಾಗಿತ್ತು.

ತನ್ನ ಪತಿಯನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದು ಇಕ್ಬಾಲ್ ಹಸನ್ ಪತ್ನಿ ಕೆ.ಐ. ರಹಮತ್ ಇಲ್ಲಿನ ನಗರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಕೋವಿಯನ್ನು ವಶಪಡಿಸಿಕೊಂಡು ಕೊಲೆ ಪ್ರಕರಣದಲ್ಲಿ 5 ಮಂದಿಯನ್ನು ಬಂಧಿಸಿದ್ದರು.

ಘಟನೆ ವಿವರ : ಚಾಮಿಯಾಲ್ ಗ್ರಾಮದ ಅಬ್ದುಲ್ ಜಾಫರ್ ಎಂಬಾತ ಹಸೀನಾ ಎಂಬ ಮಹಿಳೆಯನ್ನು ಪ್ರೀತಿಸಿದ ವಿಷಯದಲ್ಲಿ ಎರಡು ಗುಂಪುಗಳ

ನಡುವೆ ರಾಜಿ ತೀರ್ಮಾನವಾಗಿತ್ತು. ಇಕ್ಬಾಲ್ ಹಸನ್ ಆರೋಪಿಗಳ ವಿರುದ್ಧ ಗುಂಪಿಗೆ ಬೆಂಬಲ ನೀಡಿದರೆಂದು ಎರಡು ಗುಂಪುಗಳ ನಡುವೆ ವೈಷಮ್ಯ ಉಂಟಾಗಿತ್ತು. ಈ ವೈಷಮ್ಯ ಸಾಧಿಸುವ ಸಲುವಾಗಿ ಅನೀಶ್ ತನ್ನ ತಂದೆ ಉಸ್ಮಾನ್ ಹೆಸÀರಿನಲ್ಲಿದ್ದ ಜೋಡಿ ನಳಿಗೆ ಕೋವಿಯನ್ನು ತಂದೆಯಿಂದ ತೆಗೆದುಕೊಂಡು ವೀರಾಜಪೇಟೆಗೆ ಬಂದು ಕಾದು ಇಕ್ಬಾಲ್ ಹಸನ್‍ಗೆ ಗುಂಡು ಹಾರಿಸಿ ಕೊಲೆ ಮಾಡಿದ ನೆಂದು ಆರೋಪಿಸಿ ಐ.ಪಿ.ಸಿ 302, 324, 114, ಜೊತೆಗೆ 34 ಐ.ಪಿ.ಸಿ 3, 25 (ಐ.ಬಿ) (ಎ) ಮತ್ತು 30 ಭಾರತೀಯ ಶಸ್ತ್ರಾಸ್ತ ಕಾಯದೆಯಡಿ ಕೊಲೆ ಪ್ರಕರಣ ದಾಖಲಿಸಿ ಆಗಿನ ವೀರಾಜಪೇಟೆಯ ಸರ್ಕಲ್ ಇನ್ಸ್‍ಪೆಕ್ಟರ್ ಪ್ರಸಾದ್ 5ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.

ದಂಡ ಸಹಿತ ಸಜೆ : ಐ.ಪಿ.ಸಿ 302 ರ ಪ್ರಕಾರ ಮೂರು ಮಂದಿಗೆ ಜೀವಾವಧಿ ಶಿಕ್ಷೆ ತಲಾ ರೂ. 50,000 ದಂಡ, ದಂಡ ಪಾವತಿಗೆ ತಪ್ಪಿದರೆ ಎರಡು ವರ್ಷ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ. ಒಂದನೇ ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆಗೆ ಐ.ಪಿ.ಸಿ 324 ರಲ್ಲಿ ಮೂರು ವರ್ಷ ಸಜೆ ರೂ. 5000 ದಂಡ, ದಂಡ ಪಾವತಿಗೆ ತಪ್ಪಿದರೆ 6 ತಿಂಗಳ ಸಜೆ ಅನುಭವಿಸಬೇಕು. ಆರೋಪಿ ಅನೀಶ್‍ನ ತಂದೆ ಉಸ್ಮಾನ್ ಕೋವಿ ನೀಡಿದ ಆರೋಪದ ಮೇರೆ ಮೂರು ವರ್ಷ ಸಜೆ ರೂ. 10,000 ದಂಡ, ದಂಡ ಪಾವತಿಸಲು ತಪ್ಪಿದರೆ 6 ತಿಂಗಳ ಸಜೆ, ಕಲಂ 30ರಡಿಯಲ್ಲಿ ರೂ. 2000 ದಂಡ, ದಂಡ ಪಾವತಿಗೆ ತಪ್ಪಿದರೆ 3 ತಿಂಗಳ ಸಜೆ ಅನುಭವಿಸು ವಂತೆ ತೀರ್ಪು ನೀಡಲಾಗಿದೆ.

ಪ್ರಕರಣದ ನಾಲ್ಕನೇ ಆರೋಪಿ ಕೆ.ಎಚ್. ಅಜಮುದ್ದೀನ್, ಇಕ್ಬಾಲ್ ಹಸನ್‍ನ್ನು ಗುಂಡು ಹಾರಿಸಿ ಕೊಲೆ ಮಾಡುವ ಸಮಯದಲ್ಲಿ ಕಾರಿನ ಬಳಿ ಇದ್ದನು. ಈತನು ಕೊಲೆಗೆ ಸಹಕರಿಸಿದಕ್ಕೆ ಯಾವದೇ ಸಾಕ್ಷ್ಯಾಧಾರಗಳಿಲ್ಲ ಎಂದು ಆತನನ್ನು ಬಿಡುಗಡೆಗೊಳಿಸಲಾಗಿದೆ. ಈ ಕೊಲೆ ಪ್ರಕರಣದಲ್ಲಿ ನ್ಯಾಯಾಧೀಶರು ಆರೋಪ ಪಟ್ಟಿಯಲ್ಲಿ ನಮೂದಿಸಿದ್ದ 62 ಮಂದಿ ಸಾಕ್ಷ್ಯಗಳ ಪೈಕಿ 32 ಮಂದಿಯನ್ನು ವಿಚಾರಣೆ ಮಾಡಿದ್ದರು.

ದಂಡದ ರೂಪದಲ್ಲಿ ಬರುವ ಹಣದಲ್ಲಿ ಇಕ್ಬಾಲ್ ಹಸನ್‍ನ ಪತ್ನಿ ರಹಮತ್‍ಗೆ ರೂ. ಒಂದು ಲಕ್ಷ ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ. ಸರಕಾರ ಅಭಿಯಂತರ ಡಿ.ನಾರಾಯಣ ವಾದಿಸಿದರು.

ನ್ಯಾಯಾಲಯದಲ್ಲಿ ಬಿಗಿ ಬಂದೋಬಸ್ತ್ : ವೀರಾಜಪೇಟೆ ಸೆಷನ್ಸ್ ನ್ಯಾಯಾಲಯದಲ್ಲಿ ಇಕ್ಬಾಲ್ ಹಸನ್ ಕೊಲೆ ತೀರ್ಪು ಪ್ರಕಟಿಸುವ ಸಲುವಾಗಿ ಮುಂಜಾಗ್ರತೆ ಕ್ರಮವಾಗಿ ನಗರ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ನಗರ ಸಬ್‍ಇನ್ಸ್‍ಪೆಕ್ಟರ್ ಮರಿಸ್ವಾಮಿ ಸಿಬ್ಬಂದಿಗಳು ಅಪರಾಹ್ನ ಮೂರು ಗಂಟೆಯಿಂದಲೇ ನ್ಯಾಯಾಲಯದ ಆವರಣದಲ್ಲಿ ಬಂದೋ ಬಸ್ತ್‍ನಲ್ಲಿ ನಿರತರಾಗಿದ್ದರು. ಚಾಮಿಯಾಲ್ ಗ್ರಾಮದ ಆರೋಪಿಗಳ ಸಂಬಂಧಿಗಳು ಕೊಲೆ ಪ್ರಕರಣದ ತೀರ್ಪನ್ನು ಆಲಿಸಲು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.