ನಾಪೋಕ್ಲು: ನ.8. ಪೊಲೀಸ್ ಸ್ಟಿಕ್ಕರ್ ಅಂಟಿಸಿದ ವಾಹನದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು..., ಒಂದೇ ಸಂಖ್ಯೆಯ ಎರಡು ನಂಬರ್ ಪ್ಲೇಟ್‍ಗಳು..., ಪೊಲೀಸ್ ಸಮವಸ್ತ್ರಗಳು..., ಸ್ಟಿಕ್ಕರ್‍ಗಳು..., ಲಾಠಿ..., ಇದು ಯಾವದೇ ಚಲನಚಿತ್ರದ ಶೂಟಿಂಗ್ ಅಲ್ಲ...! ಬದಲಿಗೆ ಕಕ್ಕಬೆ- ಕುಂಜಿಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ಕಂಡುಬಂದ ಕೇರಳ ಮೂಲದ ಅಪರಿಚಿತ ವ್ಯಕ್ತಿಗಳು ಹಾಗೂ ಅವರ ಬಳಿ ಇದ್ದ ವಸ್ತುಗಳು...!(ಕೆಎಲ್-37 ಬಿ. 525) ನೋಂದಣಿಯ ಝೈಲೊ ಕಾರೊಂದು ಶುಕ್ರವಾರ ಬೆಳಗ್ಗಿನ ಜಾವ ನಾಲಡಿ ಗ್ರಾಮದ ಅಂಬಲ ಸೇತುವೆ ಬಳಿ ನಿಂತಿದ್ದನ್ನು ವಾಕಿಂಗ್ ತೆರಳಿದ್ದ ಗ್ರಾಮಸ್ಥರು ಗಮನಿಸಿ, ಕಾರಿನ ಬಳಿ ತೆರಳಿ ನೋಡಿದಾಗ ಕಾರಿನಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳಿರುವದು ಗೊತ್ತಾಗಿದೆ. ಈ ಸಂದರ್ಭ ಕಾರಿನಲ್ಲಿದ್ದವರ ಬಳಿ ತಾವು ಬೀಟ್ ಪೊಲೀಸರೆಂದು ಪರಿಚಯಿಸಿಕೊಂಡ ಗ್ರಾಮಸ್ಥರು ವಿಚಾರಿಸಿದ ಸಂದರ್ಭ ತಾವು ಇಲ್ಲಿ ವಿಶ್ರಾಂತಿ

(ಮೊದಲ ಪುಟದಿಂದ) ಪಡೆಯಲು ಕಾರು ನಿಲ್ಲಿಸಿದ್ದಾಗಿ ಅಪರಿಚಿತ ವ್ಯಕ್ತಿಗಳು ಹೇಳಿಕೊಂಡಿ ದ್ದಾರೆ. ಅಪರಿಚಿತ ವ್ಯಕ್ತಿಗಳ ಬಗ್ಗೆ ಸಂಶಯಗೊಂಡ ಗ್ರಾಮಸ್ಥರು ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಾಪೋಕ್ಲು ಠಾಣಾಧಿಕಾರಿ ಮಂಚಯ್ಯ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅಪರಿಚಿತ ವ್ಯಕ್ತಿಗಳನ್ನು ವಿಚಾರಿಸಿದಾಗ ತಾವು ಕೇರಳ ರಾಜ್ಯದ ಪಾಲೆಕ್ಕಾಡ್ ಜಿಲ್ಲೆಯ ಮನೋಜ್, ವಿನೋದ್, ಅಬು ಹಾಗೂ ಮಿಥುನ್ ಎಂದು ಹೇಳಿಕೊಂಡಿದ್ದಾರೆ. ವಾಹನವನ್ನು ಪರಿಶೀಲಿಸಿದ ಸಂದರ್ಭ ಕಾರಿನಲ್ಲಿ ಪೊಲೀಸ್ ಸಮವಸ್ತ್ರಗಳು, ಲಾಠಿಗಳು ಹಾಗೂ ಪೊಲೀಸ್ ಎಂಬ ನಾಮಫಲಕದ ಸ್ವಿಕ್ಕರ್‍ಗಳು ಪತ್ತೆಯಾಗಿದ್ದು, ಜೊತೆಗೆ ಕೆಎಲ್-01-ಬಿ.ಕೆ. 6069 ರಿಜಿಸ್ಟ್ರೇಷನ್ ಸಂಖ್ಯೆಯ ಎರಡು ನಂಬರ್‍ಪ್ಲೇಟ್‍ಗಳು ಪತ್ತೆಯಾಗಿವೆ. ಇವುಗಳನ್ನು ಸಿನಿಮಾ ಶೂಟಿಂಗ್‍ಗೆ ತಂದಿರುವದಾಗಿ ಕಾರಿನಲ್ಲಿದ್ದವರು ಹೇಳಿದ್ದಾರೆನ್ನ ಲಾಗಿದ್ದು, ನಾಲ್ವರು ಅಪರಿಚಿತ ವ್ಯಕ್ತಿಗಳನ್ನು ನಾಪೋಕ್ಲು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿ ಜಿಲ್ಲಾ ಅಪರಾಧ ಪತ್ತೆದಳದ ವಶಕ್ಕೊಪ್ಪಿಸಿದ್ದಾರೆನ್ನಲಾಗಿದೆ.