ವೀರಾಜಪೇಟೆ, ನ. 8: ವೀರಾಜಪೇಟೆಯಿಂದ ಮಾಕುಟ್ಟ ರಸ್ತೆಯನ್ನು ಸಂಪರ್ಕಿಸುವ ಆರ್ಜಿ, ಬೇಟೋಳಿ ಗ್ರಾಮಗಳ ಮುಖ್ಯ ರಸ್ತೆ ದುರಸ್ತಿಗೊಳಗಾಗಿದ್ದು ವಾಹನಗಳ ಸಂಚಾರಕ್ಕೂ ಅನಾನುಕೂಲವಾಗಿದೆ ಇದನ್ನು ತಕ್ಷಣ ಸರಿ ಪಡಿಸುವಂತೆ ಒತ್ತಾಯಿಸಿ ವೀರಾಜಪೇಟೆ ಪಟ್ಟಣದ ಆಟೋ ಚಾಲಕರ ಸಂಘದವರು ಇಂದು ಬೇಟೋಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮುಷ್ಕರ ನಡೆಸಿದರು.

ಸ್ಥಳದಲ್ಲಿಯೇ ಇದ್ದ ಇಲ್ಲಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎಂ.ಸುರೇಶ್ ಅವರು ಇಲಾಖೆಯಿಂದ ಗುಂಡಿ ಮುಚ್ಚಿ ರಸ್ತೆ ದುರಸ್ತಿಪಡಿಸುವ ಕಾರ್ಯ ಆರಂಭಗೊಂಡಿದೆ. ಅಕಾಲಿಕ ಮಳೆಯ ನಿಮಿತ್ತ ಕಾಮಗಾರಿ ವಿಳಂಬವಾಗಿದೆ. ಮುಂದಿನ 7ದಿನಗಳೊಳಗೆ ವೀರಾಜಪೇಟೆ ಪಟ್ಟಣದಿಂದ ಮಾಕುಟ್ಟದವರೆಗಿನ ಮುಖ್ಯ ರಸ್ತೆಯಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯಲಿದೆ. ಆಟೋ ಚಾಲಕರು ಇಲಾಖೆಯೊಂದಿಗೆ ಸಹಕರಿಸಿ ಮುಷ್ಕರವನ್ನು ಸ್ಥಗಿತಗೊಳಿಸುವಂತೆ ಭರವಸೆ ನೀಡಿದ ಮೇರೆ ಆಟೋ ಚಾಲಕರು ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದರು.

ಸಂಘದ ಅಧ್ಯಕ್ಷ ಎಂ.ಎಂ.ಶಶಿಧರ್ ಮಾತನಾಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ದುರಸ್ತಿಗೊಳಗಾಗಿರುವ ಚಿಟ್ಟಡೆ, ಆರ್ಜಿ, ಬೇಟೋಳಿ, ಪೆರುಂಬಾಡಿ ಹಾಗೂ ಮಾಕುಟ್ಟವರೆಗಿನ ಮುಖ್ಯ ರಸ್ತೆಯನ್ನು ತಕ್ಷಣ ದುರಸ್ತಿ ಪಡಿಸಬೇಕು. ಅಧಿಕಾರಿಗಳು ಈಗ ನೀಡಿರುವ ಭರವಸೆಗಳನ್ನು ತಪ್ಪದೆ ಈಡೇರಿಸುವಂತೆ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ಅಚ್ಚಪಂಡ ಮಹೇಶ್ ಗಣಪತಿ, ಇಲಾಖೆಯ ಸಹಾಯಕ ಅಭಿಯಂತರ ಯತೀಶ್, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಬಿ.ಎಂ. ರಮೇಶ್, ಪಿ.ಡಿ.ಒ ಮಣಿ, ಆಟೋ ಚಾಲಕರ ಸಂಘದ ಎಚ್.ಎ.ರಜಿನಾ, ಸಂಘದ ಎ.ಆರ್.ಚಂದ್ರರಾವ್, ಜಿ.ಜಿ.ಮೋಹನ್ ಮತ್ತಿತರರು ಹಾಜರಿದ್ದರು.