ಮಡಿಕೇರಿ, ನ. 8: ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಸುಬೇದಾರ್ ಗುಡ್ಡೇಮನೆ ಅಪ್ಪಯ್ಯ ಗೌಡರು, ಕೆದಂಬಾಡಿ ರಾಮೇಗೌಡರು, ಶಿವಾಚಾರದ ಜಂಗಮ ಕಲ್ಯಾಣ ಸ್ವಾಮಿ (ಪುಟ್ಟ ಬಸಪ್ಪ) ಮತ್ತು ಬ್ರಿಟಿಷ್ ದಾಖಲೆಗಳ ಪ್ರಕಾರ ಸೆರೆಸಿಕ್ಕಿ ಶಿಕ್ಷೆಗೊಳಗಾದವರ ಸಂಖ್ಯೆ 1113 ಮಂದಿಯ ನೆನಪನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ರೂಪಿಸುವ ನಿಟ್ಟಿನಲ್ಲಿ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಮತ್ತು ಕೃಷಿಕ ಸಾಹಿತ್ಯ ಪರಿಷತ್, ಬೆಂಗಳೂರು ಇತರ ಒಕ್ಕಲಿಗ ಸಂಘಟನೆಗಳು, ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಸಹ ಸಂಘಟನೆಗಳು, ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಸಮಾಜಗಳ ಆಶ್ರಯದಲ್ಲಿ ತಾ. 9ರಂದು (ಇಂದು) ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್, ಸಭಾಂಗಣದಲ್ಲಿ 1837 ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ವಿಚಾರ ಸಂಕಿರಣ, ಚಿತ್ರಪಟ ಮತ್ತು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಬೆಂಗಳೂರು ಒಕ್ಕಲಿಗರ ಸಂಘದ ಆವರಣದಿಂದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣಕ್ಕೆ ಮೆರವಣಿಗೆ ಮತ್ತು ಹಲವು ಹಕ್ಕೊತ್ತಾಯ ಮಂಡಿಸುವ ಮೂಲಕ ಸರ್ಕಾರ ಮತ್ತು ಮಾಧ್ಯಮಗಳ ಗಮನ ಸೆಳೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ. ನಿರ್ಮಲಾ ನಂದನಾಥ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಬಿ.ಯಸ್. ಯಡಿಯೂರಪ್ಪ, ಸಂಸದ ಡಿ.ವಿ. ಸದಾನಂದಗೌಡರು, ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ, ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಡಾ. ಪ್ರೊ. ಯಮ್. ವಿ. ಶ್ರೀನಿವಾಸ್ ಮತ್ತು ಯಮ್. ಜಿ. ನಾಗರಾಜ ಅವರಿಂದ ವಿಷಯ ಮಂಡನೆ ಮಾಡಲಿದ್ದಾರೆ.