ಮಡಿಕೇರಿ, ನ. 8: ಕೊಡಗು ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ; ತೋಟಗಾರಿಕಾ ಉತ್ಪನ್ನಗಳ ಶೇಖರಣೆ ಮತ್ತು ಮಾರಾಟ ಮಳಿಗೆ(ಹಾಪ್ ಕಾಮ್ಸ್)ಯ ಸ್ವಂತ ಕಟ್ಟಡ ಇಲ್ಲಿ ಅಂಚೆ ಕಚೇರಿ ಎದುರಿನ ನಿವೇಶನದಲ್ಲಿ; ಇದೀಗ ಕೊನೆಗೂ ತಲೆಯೆತ್ತು ವಂತಾಗಿದೆ. ಕರ್ನಾಟಕ ತೋಟಗಾರಿಕಾ ಮಹಾಮಂಡಲದಿಂದ ಮಡಿಕೇರಿಗೆ ಬಿಡುಗಡೆಗೊಂಡಿರುವ ರೂ. 1.45 ಕೋಟಿ ಅನುದಾನದಿಂದ ಈ ಕಾಮಗಾರಿ ನಡೆಯುತ್ತಿದೆ.

ಪ್ರಸಕ್ತ ನೆಲಅಂತಸ್ತು ಕಾಮಗಾರಿ ಯೊಂದಿಗೆ ಕಟ್ಟಡದ ಮೊದಲನೆಯ ಅಂತಸ್ತು ಕೆಲಸ ಮುಂದುವರಿದಿದೆ. ಇಲ್ಲಿ ಆಧುನಿಕ ತಂತ್ರಜ್ಞಾನದಿಂದ ಕೂಡಿದ ‘ಹೈಟೆಕ್’ ಮಳಿಗೆ ರೂಪಿಸಲಾಗುವದು ಎಂದು ಮಡಿಕೇರಿ ‘ಹಾಪ್‍ಕಾಮ್ಸ್’ ಸಂಸ್ಥೆಯ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಅವರು ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.

ಅಲ್ಲದೆ ಕೊಡಗು ಜಿಲ್ಲೆಯಲ್ಲಿ ಬೆಳೆಯುವಂತಹ ಎಲ್ಲಾ ತೋಟಗಾರಿಕಾ ಬೆಳೆಗಳನ್ನು; ಇಲ್ಲಿನ ರೈತರಿಂದ ಕೊಂಡುಕೊಳ್ಳುವದ ರೊಂದಿಗೆ ನ್ಯಾಯಬೆಲೆಯಲ್ಲಿ ಗ್ರಾಹಕರಿಗೆ ತಲಪಿಸಲು ಭವಿಷ್ಯದಲ್ಲಿ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಅವರು ಮಾಹಿತಿ ನೀಡಿದರು.

ನಿವೇಶನಕ್ಕೆ ಧಕ್ಕೆ: ಈಗಾಗಲೇ ಕೊಡಗು ತೋಟಗಾರಿಕಾ ಬೆಳೆಗಳ ಸಹಕಾರ ಸಂಘಕ್ಕೆ ಮಂಜೂರಾಗಿರುವ ಈ ನಿವೇಶನವು 36 ಸೆಂಟ್ ಜಾಗದಿಂದ ಕೂಡಿದ್ದು; ಪುರಾತತ್ವ ಇಲಾಖೆಯಿಂದ ಎರಡು ಅಂತಸ್ತಿನ ಕಟ್ಟಡಕ್ಕೆ ಮಾತ್ರ ಅನುಮತಿ ಲಭಿಸಿದೆ ಎಂದು ಮಾಹಿತಿ ನೀಡಿದ ರಮೇಶ್ ಚಂಗಪ್ಪ, ಪಕ್ಕದ ಖಾಸಗಿ ನಿವೇಶನ ಹೊಂದಿರುವ ವ್ಯಕ್ತಿಯೊಬ್ಬರು ತಮ್ಮ ಸಂಸ್ಥೆಯ ಜಾಗಕ್ಕೆ ಹಾನಿಗೊಳಿಸಿ ರುವದಾಗಿ ವಿವರಿಸಿದರು.

ಕೆಳಭಾಗದಿಂದ ಜೆಸಿಬಿ ಯಂತ್ರದ ಮೂಲಕ ಬರೆಯನ್ನು ಕೊರೆದು; ಹಾಪ್‍ಕಾಮ್ಸ್ ಕಟ್ಟಡದ ನಿವೇಶನಕ್ಕೆ ಧಕ್ಕೆ ಉಂಟು ಮಾಡಿದ್ದು; ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ನಗರಸಭೆ ಆಡಳಿತಕ್ಕೆ ದೂರು ದಾಖಲಿಸಿರುವದಾಗಿ ಅವರು ತಿಳಿಸಿದರು. ಅಲ್ಲದೆ; ಸಂಬಂಧಿಸಿದ ವ್ಯಕ್ತಿ ತಡೆಗೋಡೆ ನಿರ್ಮಿಸಿ ಸಂಸ್ಥೆಯ ನಿವೇಶನಕ್ಕೆ ಹಾನಿಯಾಗದಂತೆ ಸರಿಪಡಿಸಿಕೊಡುವ ಆಶ್ವಾಸನೆ ನೀಡಿರುವದಾಗಿ ವಿವರಿಸಿದರು.

ಮಾರ್ಚ್‍ನಲ್ಲಿ ಉದ್ಘಾಟನೆ: ಮುಂದಿನ ಮಾರ್ಚ್‍ನಿಂದ ನೂತನ ಕಟ್ಟಡದಲ್ಲಿ ಕಾರ್ಯಚಟುವಟಿಕೆ ನೆರವೇರಿಸುವ ದಿಸೆಯಲ್ಲಿ ಉದ್ಘಾಟನೆ ಮಾಡಲಾಗುವದು ಎಂದಿರುವ ಅವರು; ಈ ಮೂಲಕ ರೈತರು ಮತ್ತು ಗ್ರಾಹಕರಿಗೆ ಹೆಚ್ಚಿನ ಪ್ರೋತ್ಸಾಹ ದೊರಕಿಸಿಕೊಡುವದಾಗಿ ಇಂಗಿತ ವ್ಯಕ್ತಪಡಿಸಿದರು.