ವೀರಾಜಪೇಟೆ, ನ. 8: ವೀರಾಜಪೇಟೆ ಪಟ್ಟಣ ಸೇರಿದಂತೆ ಗೋಣಿಕೊಪ್ಪಲಿನಲ್ಲಿ ಅನಧಿಕೃತವಾಗಿ ಬೇನಾಮಿ ಸಂಘ ಸಂಸ್ಥೆಗಳು ಹಣಕಾಸು ವ್ಯವಹಾರ ನಡೆಸುತ್ತಿದ್ದು ವಸೂಲಾತಿಯಲ್ಲಿ ಹಗಲು ದರೋಡೆ ನಡೆಸುತ್ತಿದಾರೆ. ಸಾಲ ವಿತರಣೆ ಮಾಡಿ ಮೀಟರ್ ಬಡ್ಡಿ ವಿಧಿಸಿ ವಸೂಲು ಮಾಡುವದರಿಂದ ಬಡ ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲಪಿದೆ, ಸರ್ಕಾರ ಇಂತಹ ಸಂಘ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾ. 9 ರಂದು ತಹಶೀಲ್ದಾರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಜೆಡಿಎಸ್ ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷೆ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಬೇನಾಮಿ ಹಣಕಾಸು ಸಂಸ್ಥೆಗಳು ಪಟ್ಟಣದಲ್ಲಿರುವ ಬಡ ಮಹಿಳಾ ಕೂಲಿ ಕಾರ್ಮಿಕರನ್ನು ಅಧಿಕ ಬಡ್ಡಿ ದಂಧೆಗೆ ಗುರಿಯಾಗಿಸಿಕೊಂಡು 5 ಜನರ ಗುಂಪುಗಳನ್ನಾಗಿ ಮಾಡಿ ಹಣಕಾಸಿನ ವ್ಯವಹಾರ ನಡೆಸುತ್ತಿದ್ದಾರೆ. ಪ್ರಾರಂಭದಲ್ಲಿ ಹಣ ಪಡೆದುಕೊಳ್ಳುವಾಗ ಇಂತಿಷ್ಟು ಬಡ್ಡಿ ದರವನ್ನು ನಿಗದಿ ಪಡಿಸದೆ ಹಣ ಹಿಂತಿರುಗಿಸುವಾಗ ಮಾತ್ರ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಹಣ ಪಡೆಯುವಾಗ ದಾಖಲೆಯಾಗಿ ಸರ್ಕಾರದ ಆಧಾರ್‍ಕಾರ್ಡ್ ಮತ್ತು ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ಬಡ್ಡಿ ನೀಡದಿದ್ದರೆ ಆಧಾರ್‍ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಯನ್ನು ನೀಡುವದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಇಂತಹ ಸಂಸೆÀ್ಥಗಳ ಬಗ್ಗೆ ಸರ್ಕಾರ ಕೂಡಲೇ ಕ್ರಮ ತೆಗದುಕೊಳ್ಳಬೇಕು ಇಂತಹ ಲೇವಾದೇವಿ ಸಂಸ್ಥೆಗಳನ್ನು ತಕ್ಷಣ ನಿಷೇಧಿಸಬೇಕು ಎಂದರು.

ಜೆ.ಡಿ.ಎಸ್.ನ ವೀರಾಜಪೇಟೆ ತಾಲೂಕು ಅಧ್ಯಕ್ಷ ಎಸ್.ಹೆಚ್. ಮತೀನ್ ಮಾತನಾಡಿ, ಬೇನಾಮಿ ಹಣಕಾಸು ಸಂಸ್ಥೆಗಳು ಬಡ ಕೂಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಶೇ. 18 ರಿಂದ 23 ರವರೆಗೆ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇಂತಹ ಹಣಕಾಸು ಸಂಸ್ಥೆಗಳು ಸರ್ಕಾರದ ಕಾನೂನನ್ನು ಪಾಲಿಸುತ್ತಿದೆಯೇ ಎಂದು ಪ್ರಶ್ನಿಸಿದಲ್ಲದೆ ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಪಕ್ಷದ ನಗರ ಸಮಿತಿ ಅಧ್ಯಕ್ಷ ಎಸ್.ಎಚ್.ಮಂಜುನಾಥ್ ಮಾತನಾಡಿ ಹಣ ವಸೂಲಾತಿ ಮಾಡುವಾಗ ಸಂಸ್ಥೆಯ ಕೆಲವರು ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವದಲ್ಲದೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದಲ್ಲದೆ ಹಣ ಸಾಲ ಪಡೆದುಕೊಂಡವರು ದುಬಾರಿ ಬಡ್ಡಿಗೆ ಕಡಿವಾಣವಾಗಿ ಕೂಲಿ ಕಾರ್ಮಿಕರು ನ್ಯಾಯ ಸಮ್ಮತವಾದ ಸಾಲದ ಹಣವನ್ನು ಹಿಂತಿರುಗಿಸ ಲಿರುವದಾಗಿಯೂ ಹೇಳಿದರು.

ಪೊನ್ನಂಪೇಟೆ ಹೋಬಳಿ ಘಟಕದ ಅಧ್ಯಕ್ಷ ಪುಷ್ಪಾ ಮಾತನಾಡಿ, ಅನಧಿಕೃತ ಹಣಕಾಸು ಸಂಸ್ಥೆಗಳು ಸಾಲಗಾರರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಕುರಿತು ಕೊಡಗು ಜಿಲ್ಲಾಧಿಕಾರಿಗೂ ದೂರು ನೀಡಿರುವದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಪಡಿಕಲ್ ಕುಸುಮಾವತಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜಿಲ್ಲಾಧ್ಯಕ್ಷೆ ಹೆಚ್.ಬಿ. ಜಯ ಉಪಸ್ಥಿತರಿದ್ದರು.