ಮಡಿಕೇರಿ ನ.8 : ಮಳೆಹಾನಿ ಪರಿಹಾರದ ಹಣವನ್ನು ಖಾಸಗಿ ಬ್ಯಾಂಕ್‍ನಲ್ಲಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ ಅವರಿಗೆ ಸಹಕರಿಸಿದ ಉಳಿದ ತಪ್ಪಿತಸ್ತರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಖಾಸಗಿ ಬ್ಯಾಂಕ್‍ನಲ್ಲಿ ಸುಮಾರು 28 ಕೋಟಿ ರೂ.ಗಳನ್ನು ಇರಿಸಿದ ಪ್ರಕರಣವನ್ನು ಪತ್ತೆ ಹಚ್ಚಿದ ಜಿ.ಪಂ ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಒತ್ತಡ ಹೇರಿ ತನಿಖಾ ಸಮಿತಿ ಸಭೆ ನಡೆಯುವಂತೆ ಮಾಡಿದ್ದಾರೆ. ಇದರ ಪರಿಣಾಮ ಶ್ರೀಕಂಠಯ್ಯ ಅವರ ಮತ್ತಷ್ಟು ಲೋಪಗಳು ಬೆಳಕಿಗೆ ಬಂದಿದೆ. ವಿಪಕ್ಷ ಸದಸ್ಯರ ಹೋರಾಟ ಫಲ ನೀಡಿರುವದು ಸ್ವಾಗತಾರ್ಹವೆಂದು ತಿಳಿಸಿದ್ದಾರೆ.

ಪರಿಹಾರದ ಹಣವನ್ನು ಖಾಸಗಿ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿರುವದು ಗಮನಿಸಿದರೆ ಶ್ರೀಕಂಠಯ್ಯ ಅವರಿಗೆ ಬೆಂಬಲವಾಗಿ ಇನ್ನೂ ಕೆಲವರು ಕಾರ್ಯ ನಿರ್ವಹಿಸಿರುವ ಬಗ್ಗೆ ಸಂಶಯ ಮೂಡಿದೆ ಎಂದು ಸುರೇಶ್ ಆರೋಪಿಸಿದ್ದಾರೆ. ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದಲ್ಲಿ ಭಾಗಿಯಾಗಿರುವ ಎಲ್ಲಾ ತಪ್ಪಿತಸ್ತರು ಬೆಳಕಿಗೆ ಬರುವ ಸಾಧ್ಯತೆಗಳಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಶ್ರೀಕಂಠಯ್ಯ ಸೇರಿದಂತೆ ಶಾಮೀಲಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ನಿಷ್ಪಕ್ಷಪಾತ ತನಿಖೆಗೆ ಅವಕಾಶ ನೀಡದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟವನ್ನು ತೀವ್ರಗೊಳಿಸುವದಾಗಿ ಸುರೇಶ್ ಎಚ್ಚರಿಕೆ ನೀಡಿದ್ದಾರೆ.