ಸುಂಟಿಕೊಪ್ಪ, ನ. 7: ಜಿಲ್ಲೆಯ ಖಾಝಿ ಆಗಿದ್ದ ಪೂಕಳಂ ಅಬ್ದುಲ್ಲ ಮುಸ್ಲಿಯಾರ್ ಅವರ ನಿಧನಕ್ಕೆ ಸುಂಟಿಕೊಪ್ಪದ ಶರೀಯತ್ ಕಾಲೇಜಿನ ವತಿಯಿಂದ ಅನುಸ್ಮರಣೆ ಸಭೆಯನ್ನು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಜಿಲ್ಲೆಯಲ್ಲಿ 13 ವರ್ಷಗಳ ಕಾಲ ಖಾಝಿ ಹಾಗೂ 20ವರ್ಷಗಳ ಕಾಲ ವಿವಿಧ ಮದರಸಗಳಲ್ಲಿ ಮುದರ್ರಿಸ್ ಆಗಿ ನಿಸ್ವಾರ್ಥ ಸೇವೆ ಸಲ್ಲಿಸಿ ಎಲ್ಲಾ ಸಮುದಾಯಗಳ ಪ್ರೀತಿ ಗೌರವಕ್ಕೆ ಪಾತ್ರರಾದ ಪೂಕಳಂ ಅಬ್ದುಲ್ಲ ಉಸ್ತಾದ್ ಸರಳ ಬದುಕು, ನಿಸ್ವಾರ್ಥ ಸೇವೆ, ಶ್ರೇಷ್ಠ ಮಾರ್ಗದರ್ಶನ, ಸಜ್ಜನತೆಯ ನಡತೆ, ಉತ್ತಮ ಸ್ವಭಾವ ಹಾಗೂ ಅವರ ನಡೆನುಡಿಗಳೆಲ್ಲವೂ ಸಮುದಾಯಕ್ಕೆ ಮಾದÀರಿಯಾಗಿತ್ತು. ಇಸ್ಲಾಮಿಕ್ ಧರ್ಮ ಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದ ಅವರು ಸಮುದಾಯದಲ್ಲಿ ಯಾವದೇ ಸಮಸ್ಯೆ ಉದ್ಭವಿಸಿದರೂ ಕ್ಷಣಾರ್ಧದಲ್ಲಿ ಅದನ್ನು ನಿಭಾಯಿಸುವದರಲ್ಲಿ ಶಕ್ತರಾಗಿದ್ದರು. ಖಾಝಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯ ಮುಸ್ಲಿಂ ಸಮುದಾಯದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಸಮಾಜಸೇವೆ ಇನ್ನಿತರ ಜಾಗೃತಿ ಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ದರು.

ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸುವದರೊಂದಿಗೆ ಪರಮಾತ್ಮನ ಮೋಕ್ಷಕ್ಕೆ ಖುರ್‍ಆನ್ ಪಾರಾಯಣ ತಹ್‍ಲೀಲ್ ಹೇಳಿ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಉಪಖಾಜಿ ಅಬ್ದುಲ್ಲ ಫೈಜಿ ಅವರು ವಹಿಸಿದ್ದರು.

ಉಸ್ಮಾನ್ ಫೈಝಿ ಮುದರ್ರಿಸ್, ಸುಂಟಿಕೊಪ್ಪ ಮಸೀದಿಯ ಝೈನುದ್ದೀನ್ ಫೈಜಿ, ಶರೀಯತ್ ಕಾಲೇಜಿನ ಪ್ರಾಂಶುಪಾಲ ಉಮ್ಮರ್ ಫೈಜಿ, ಅಶ್ರಫ್ ಫೈಜಿ, ಹಮೀದ್ ಫೈಜಿ ನಾಲಗತ್ತ್, ಹಸನ್ ಕುಂಜ್ಞಿ ಹಾಜಿ, ನೌಶಾದ್ ಫೈಜಿ, ಅಶ್ರಫ್ ಮಿಸ್‍ಬಾಯ್ ಸೇರಿದಂತೆ ಇತರರು ಇದ್ದರು.