ನಂಜರಾಯಪಟ್ಟಣ, ನ. 6 : ಸಮೀಪದ ಮೀನುಕೊಲ್ಲಿ ಮತ್ತು ಆನೆಕಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ ಹಾಗೂ ವನ್ಯ ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ವತಿಯಿಂದ ಅಳವಡಿಸಿದ್ದ ಸೋಲಾರ್ ಬೇಲಿ ನಿರ್ವಹಣೆ ಕೊರತೆಯಿಂದ ತುಂಡಾಗಿ ಹೋಗಿದ್ದು, ಅರಣ್ಯದಂಚಿನ ಗ್ರಾಮಗಳ ಜನರಲ್ಲಿ ಆತಂಕ ಉಂಟಾಗಿದೆ.
ಏಳನೇ ಹೊಸಕೋಟೆ ಮೇಟ್ನಹಳ್ಳದಿಂದ ಕಂಬಿಬಾಣೆ ಗ್ರಾ.ಪಂ.ವ್ಯಾಪ್ತಿಯ ಚಿಕ್ಲಿಹೊಳೆ ಜಲಾಶಯದವರೆಗೆ 6 ಕಿ.ಮೀ. ದೂರ ಕಳೆದ ಮೂರು ವರ್ಷಗಳ ಹಿಂದೆ ಸೋಲಾರ್ ಬೇಲಿ ಅಳವಡಿಸಲಾಗಿತ್ತು. ಈ ಬೇಲಿ ಅಳವಡಿಸಿದ ನಂತರ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಹಾಗೂ ಕಳೆದ ಮೂರು ತಿಂಗಳು ಸುರಿದ ಧಾರಾಕಾರ ಮಳೆಯಿಂದಾಗಿ ಬೇಲಿಯ ತಂತಿಗಳು ತುಕ್ಕು ಹಿಡಿಯುತ್ತಿರುವದರೊಂದಿಗೆ ಕೆಲವು ಕಡೆಗಳಲ್ಲಿ ತುಂಡಾಗಿವೆ. ಇದರಿಂದ ರಾತ್ರಿ ವೇಳೆಯಲ್ಲಿ ಅರಣ್ಯದಿಂದ ಕಾಡಾನೆ ಹಿಂಡು ಕಾಫಿ ತೋಟಗಳಿಗೆ ಹಾಗೂ ಜನವಸತಿ ಪ್ರದೇಶಕ್ಕೆ ಲಗ್ಗೆ ಹಾಕುತ್ತ ದಾಂಧಲೆ ನಡೆಸುತ್ತಿವೆ. ಹತ್ತಾರೂ ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಕಾಫಿ ತೋಟ ಹಾಗೂ ಇತರ ಕೃಷಿ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಲಿಹೊಳೆ ವ್ಯಾಪ್ತಿಯಲ್ಲಿ ರೂ. 60 ಹಾಗೂ ಮಾಲ್ದಾರೆ ವ್ಯಾಪ್ತಿಯಲ್ಲಿ ಸುಮಾರು ರೂ. 80 ಲಕ್ಷ ವೆಚ್ಚದಲ್ಲಿ ಸೋಲಾರ್ ಬೇಲಿ ಅಳವಡಿಸಲಾಗಿದ್ದು, ತಂತಿ ಬೇಲಿ ಕಳಪೆ ಗುಣಮಟ್ಟದಿಂದ ಕೂಡಿರುವ ಹಿನ್ನೆಲೆಯಲ್ಲಿ ತಂತಿ ಬೇಲಿ ಮುರಿದು ಬಿದ್ದಿವೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ತಂತಿ ಬೇಲಿ ದುರಸ್ತಿಪಡಿಸಬೇಕು ಎಂದು ಕಾಡಂಚಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೈಸೂರಿನ ಗುತ್ತಿಗೆದಾರರ ಅಂಬರೀಶ್ ಎಂಬಾತ ಈ ಸೋಲಾರ್ ಬೇಲಿ ಕಾಮಗಾರಿಯನ್ನು ನಿರ್ವಹಣೆ ಮಾಡಿದ್ದು, ಅರಣ್ಯ ಇಲಾಖೆಯ ಯೋಜನೆ ಪ್ರಕಾರ ಪೂರ್ಣಗೊಳಿಸಿಲ್ಲ. ಅಲ್ಲದೆ ಕಳಪೆ ಗುಣಮಟ್ಟದ ತಂತಿಗಳನ್ನು ಅಳವಡಿಸಲಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಬೇಲಿ ದುರಸ್ತಿಗೊಂಡಿದೆ. ಈ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಅಲ್ಲದೆ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರಪೇಟೆ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು ಒತ್ತಾಯಿಸಿದ್ದಾರೆ.