ಸುಮಾರು ಹದಿನಾರು ರಾಷ್ಟ್ರಗಳ ದೊಡ್ಡ ವಾಣಿಜ್ಯ ಒಕ್ಕೂಟ ರಚನೆಯಲ್ಲಿ ಸಹಿ ಬೀಳಲಿದ್ದ ಖಅಇP ಒಪ್ಪಂದಕ್ಕೆ ಭಾರತ ಹಿಂದೇಟು ಹಾಕಿದ್ದರಿಂದ ಸಧ್ಯ ಕಾಫಿ ಬೆಳೆಗಾರರೂ ಕೂಡಾ ಹೊಡೆತದಿಂದ ತಪ್ಪಿಸಿಕೊಂಡಿದ್ದಾರೆ. ಹಲವು ಸುತ್ತುಗಳ ಮಾತುಕತೆಯಲ್ಲಿ ಭಾಗವಹಿಸಿದ್ದ ಭಾರತ ಒಪ್ಪಂದ ತಿರಸ್ಕರಿಸಿ ದೇಶದ ಕೃಷಿಕರಲ್ಲಿ ತಿಳಿ ವಾತಾವರಣ ಸೃಷ್ಟಿಸಿದೆ.ಈ ಒಪ್ಪಂದದ ಸ್ವರೂಪ (ಆರ್.ಸಿ.ಇ.ಪಿ.) ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆಯ ಉದ್ದೇಶಕ್ಕಿಂತ ಭಿನ್ನವಾಗಿರುವದರಿಂದ ಒಪ್ಪಂದವನ್ನು ತಿರಸ್ಕರಿಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಆದರೂ 2020ರ ಫೆಬ್ರವರಿಯಲ್ಲಿ ವಿಯೆಟ್ನಾಂನಲ್ಲಿ ಏಷಿಯಾದ ಮಿತ್ರರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲಿದ್ದು, ಭಾರತ ತನ್ನ ನಿಲುವು ಬದಲಿಸದಿದ್ದಲ್ಲಿ ಕೃಷಿಕರು - ಬೆಳೆಗಾರರು ನೆಮ್ಮದಿಯ ಉಸಿರು ಬಿಡಬಹುದು.
ಉಪಾಸಿ ಅಧ್ಯಕ್ಷ ಎಲ್.ಆರ್.ಎಂ. ನಾಗಪ್ಪನ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಮೇಲಿನ ಒಪ್ಪಂದಕ್ಕೆ ಭಾರತ ಒಪ್ಪಿಕೊಂಡಲ್ಲಿ ಕಾಫಿ, ರಬ್ಬರ್, ಕಾಳುಮೆಣಸು ಮತ್ತು ಟೀ ಉದ್ಯಮ ಅಪಾಯದ ಅಂಚಿಗೆ ತಳ್ಳಲ್ಪಡುತ್ತದೆ ಎಂದು ಎಚ್ಚರಿಸಿದ್ದಾರೆ. ಅತೀ ದೊಡ್ಡ ಪೆಟ್ಟು ದೇಶದ ಹೈನೋದ್ಯಮದ ಮೇಲೆ ಬೀಳುತ್ತಿತ್ತು ಎಂಬ ಆತಂಕ ದೇಶದಲ್ಲಿತ್ತು.2012ರಲ್ಲಿ ಯುಪಿಎ ಸರಕಾರ ಇದ್ದ ಸಂದರ್ಭ ಈ ಮಾತುಕತೆ ಆರಂಭವಾಗಿತ್ತು. ಕೆಲವು ಸರಕುಗಳನ್ನು ಸುಂಕ ರಹಿತ ವ್ಯಾಪಾರದಿಂದ ಹೊರಗೆ ಇರಿಸಲು ಸರಕಾರ ಪ್ರತಿಪಾದಿಸಿತ್ತು. ಇದೀಗ ಚೀನಾ ಸರಕಾರದ ಒತ್ತಾಸೆಯಂತೆ ಒಪ್ಪಿಗೆಗೆ ಕರಡು ಪ್ರತಿ ಅಂತಿಮಗೊಳಿಸಲು ಇತರ ರಾಷ್ಟ್ರಗಳು ಮುಂದಾಗಿವೆ. ಸುಂಕರಹಿತ ಆಮದು - ರಫ್ತು ಮಾಡಲು ಮುಂದಾದರೆ ಕೃಷಿ ಉತ್ಪನ್ನಗಳು ದೇಶದ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಈಗಾಗಲೇ ಕುಸಿದಿರುವ ಕಾಫಿ, ಚಹಾ, ಕರಿಮೆಣಸು, ರಬ್ಬರ್ ಬೆಲೆ ಮತ್ತಷ್ಟು ನೆಲಕಚ್ಚುವ ಅಪಾಯವಿದೆ.
ಸಹಿ ಹಾಕುವಂತೆ ಭಾರತದ ಮನವೊಲಿಸಲು ಇತರ ರಾಷ್ಟ್ರಗಳು ಯತ್ನಿಸುತ್ತಿದ್ದು, ಭಾರತ ದಿಟ್ಟತನ ಪ್ರದರ್ಶಿಸಲಿ. ಬೆಳೆಗಾರರ ಹಿತ ಕಾಯಲಿ.
ಕಡಿವಾಣವಿರಲಿ
ಜಿಲ್ಲೆಯ ಎರಡು ಅನಧಿಕೃತ ಹೋಂ ಸ್ಟೇಗಳಲ್ಲಿ ಅನೈತಿಕ ಚಟುವಟಿಕೆ ಕಂಡುಬಂದಿದ್ದು, ಜಿಲ್ಲಾ ಆಡಳಿತ ಕ್ರಮ ಕೈಗೊಂಡಿದೆ.
ಒಂದು ಖಾಯಿಲೆ ಗುಣಪಡಿಸುವದಕ್ಕಿಂತ, ಖಾಯಿಲೆ ಬಾರದಂತೆ ನೋಡಿಕೊಳ್ಳುವದು ಮುಖ್ಯ ಎಂಬ ಮಾತಿದೆ. ಜಿಲ್ಲೆಯಲ್ಲಿ ನೂರಾರು ಅನಧಿಕೃತ ಹೋಂ ಸ್ಟೇಗಳು, ಗೆಸ್ಟ್‍ಹೌಸ್ ಮತ್ತು ಹೊಟೇಲ್‍ಗಳು ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಜಿಲ್ಲಾ ಆಡಳಿತ ತುರ್ತು ಗಮನ ಹರಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವದು ಅವಶ್ಯ. ಅನಧಿಕೃತ ವಹಿವಾಟನ್ನು ನಿಲ್ಲಿಸಿ ನೋಂದಣಿ ಹೊಂದಿರುವ ಹೋಂ ಸ್ಟೇ, ಹೊಟೇಲ್ - ವಸತಿಗೃಹಗಳನ್ನು ಮಾತ್ರ ಬೆಂಬಲಿಸಿದಲ್ಲಿ ಪ್ರವಾಸೋದ್ಯಮದ ಪಾವಿತ್ರ್ಯ ಉಳಿಯುತ್ತದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಕೂಡಾ ಈ ವೃತ್ತಿಗೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡಬೇಕಿದೆ. ಹಣದ ಆಸೆಯಿಂದಾಗಿ ಕೊಡಗಿನ ಸಂಸ್ಕøತಿಗೆ, ಸೌಂದರ್ಯಕ್ಕೆ, ಆತಿಥ್ಯಕ್ಕೆ ಹಾಗೂ ಜನತೆಯ ಸಜ್ಜನಿಕೆಗೆ ಅವಮಾನ ತರುವ, ಗೌರವಕ್ಕೆ ಧಕ್ಕೆ ತರುವ ಚಟುವಟಿಕೆಗಳನ್ನು ನಡೆಸಿ ಮಾನ ಕಳೆಯುವ ಕೆಲಸ ಮಾಡದಿರಲಿ.
-ಬಿ.ಜಿ. ಅನಂತಶಯನ,
ಸಲಹಾ ಸಂಪಾದಕ.