ಆಲೂರು ಸಿದ್ದಾಪುರ, ನ.7: ಇಲ್ಲಿಗೆ ಸಮೀಪದ ಮೈಲತ್ಪುರ ಗ್ರಾಮದ ಸರ್ವೆ ನಂಬರ್ 1/3 ರಲ್ಲಿ ಸುಮಾರು 18 ಎಕರೆ ಊರುಡುವೆ ಮತ್ತು 1/4 ಸುಮಾರು 22 ಎಕರೆ ಗೋಮಾಳ ಜಮೀನಿದೆ. ಬಹಳಷ್ಟು ವರ್ಷಗಳಿಂದ ಈ ಜಾಗ ಪಾಳು ಬಿದ್ದಿದ್ದು ಇದೀಗ ದಟ್ಟಾರಣ್ಯವಾಗಿದೆ. ಆದರೆ ಇತ್ತೀಚೆಗೆ ಕೆಲ ತಿಂಗಳಿನಿಂದ ಈ ಭೂಮಿಯ ಮೇಲೆ ಹಲವರ ವಕ್ರ ದೃಷ್ಟಿ ಬಿದ್ದಿದ್ದು ರಾತೋ ರಾತ್ರಿ ಜೆಸಿಬಿ ತಂದು ಕಾಡು ಕಡಿದು ಜಮೀನು ಅತಿಕ್ರಮಣ ಮಾಡಿದ್ದಾರೆ. ಇದರಿಂದ ಪ್ರೇರೇಪಿತರಾದ ಗ್ರಾಮದ ಇನ್ನೂ ಹಲವು ಮಂದಿ ತಾವೂ ಕೂಡ ಊರುಡುವೆ ಜಾಗದಲ್ಲಿ ಕಾಡು ಕಡಿದು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಅದರಲ್ಲಿ ಮೆಣಸು, ಬೆಂಡೆ ಸೇರಿದಂತೆ ವಿವಿಧ ಬಗೆಯ ತರಕಾರಿಯನ್ನೂ ಬೆಳೆಯಲಾರಂಭಿಸಿ ದ್ದಾರೆ. ಈ ಭೂಮಿಯಲ್ಲಿ ಅಪಾರ ಪ್ರಮಾಣದ ಬಿದಿರುಗಳಿದ್ದು ಎಲ್ಲವನ್ನೂ ಕಡಿದು ಬೆಂಕಿ ಹಚ್ಚಲಾಗಿದೆ. ಜೊತೆಗೆ ಕೆಲವು ಬೆಲೆ ಬಾಳುವ ಮರಗಳ ಕಡಿತಲೆಗಳು ಕೂಡ ಅಲ್ಲಲ್ಲಿ ಕಂಡು ಬರುತ್ತಿದೆ. ಬಹಳಷ್ಟು ಶ್ರೀಗಂಧದ ಮರಗಳಿದ್ದು ಅವುಗಳನ್ನು ಅಲ್ಲಿಯೇ ಬಿಡಲಾಗಿದೆ. ಈಗಾಗಲೇ ಸುಮಾರು 20 ಎಕರೆಗೂ ಅಧಿಕ ಭೂಮಿ ಅತಿಕ್ರಮಣಕ್ಕೆ ಒಳಗಾಗಿದ್ದು ದಿನಂಪ್ರತಿ ಇದರ ಪ್ರಮಾಣ ಹೆಚ್ಚುತ್ತಲೇ ಇದೆ.

ಮೈಲತ್ಪುರ ಗ್ರಾಮದ ಹಲವರು ಭೂ ಅತಿಕ್ರಮಣ ಮಾಡಿದ ಬೆನ್ನಿಗೇ ಸಮೀಪದ ಮೆಣಸೆ ಮನೆಹಳ್ಳಿ ಗ್ರಾಮದ ಕೆಲವರು ಕೂಡ ಅತಿಕ್ರಮಣಕ್ಕೆ ಮುಂದಾಗಿದ್ದು ಇದಕ್ಕೆ ಮೈಲತ್ಪುರ ಗ್ರಾಮದ ಹಲವರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಹಾಗಾಗಿ ಈ ಊರುಡುವೆ ಮತ್ತು ಗೋಮಾಳ ಜಾಗ ಮೈಲತ್ಪುರ ಮತ್ತು ಮೆಣಸೆ ಗ್ರಾಮದ ಮಧ್ಯೆ ವೈಮನಸ್ಯ ಸೃಷ್ಟಿಸಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಇದೇ ಗ್ರಾಮದಲ್ಲಿ ಗರಗಂದೂರು ಗ್ರಾಮದ ನಿವೃತ್ತ ಸೈನಿಕ ಗಿರೀಶ್ ಎಂಬವರು ತಮಗೆ ಭೂಮಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಬಳಿಕ ಸುಮಾರು ಆರು ಎಕರೆ ಜಾಗದಲ್ಲಿ ಕಾಡು ಕಡಿದು ಕೃಷಿ ಮಾಡಲು ಆರಂಭಿಸಿದ್ದರು. ಆದರೆ ಇದಕ್ಕೆ ಕೆಲವು ಭೂ ಅತಿಕ್ರಮಣಕಾರರು ಆಕ್ಷೇಪ ವ್ಯಕ್ತಪಡಿಸಿ ಆ ಜಾಗವನ್ನು ಕೂಡ ತಮ್ಮ ಸುಪರ್ಧಿಗೆ ತೆಗೆದು ಕೊಂಡಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಅರಣ್ಯ ಇಲಾಖೆ ಮೌನ: ಮೈಲತ್ಪುರಕ್ಕೆ ಒಂದೆರಡು ಬಾರಿ ಭೇಟಿ ನೀಡಿದ ಅರಣ್ಯ ರಕ್ಷಕರು ಜಾಗ ಅತಿಕ್ರಮಣಕಾರರಿಗೆ ಕೇವಲ ಎಚ್ಚರಿಕೆ ನೀಡಿ ತೆರಳಿದ್ದಾರೆ ಎನ್ನಲಾಗಿದೆ. ಈ ಕುರಿತು ‘ಶಕ್ತಿ’ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಅವರ ಗಮನ ಸೆಳೆದ ಹಿನ್ನೆಲೆಯಲ್ಲಿ ಪ್ರಕರಣ ಕುರಿತು ಪರಿಶೀಲಿಸಿ ತಕ್ಷಣವೇ ವರದಿ ನೀಡುವಂತೆ ಶನಿವಾರಸಂತೆ ವಲಯ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಗೋಮಾಳ, ಊರುಡುವೆ, ದೇವರಕಾಡುಗಳು ಜಿಲ್ಲಾ ಅರಣ್ಯ ವಿಭಾಗಕ್ಕೆ ಸೇರಿದ್ದಾಗಿದ್ದು, ಅವುಗಳ ಅತಿಕ್ರಮಣ ಮಾಡುವದು ಕಾನೂನು ಪ್ರಕಾರ ಅಪರಾಧ ಎಂದು ಮಾಹಿತಿ ನೀಡಿದ್ದಾರೆ. ಈ ಜಾಗಗಳ ಅತಿ ಕ್ರಮಣ ಪ್ರಕರಣಗಳಿದ್ದಲ್ಲಿ ತಕ್ಷಣವೇ ಕಂದಾಯ ಇಲಾಖೆ ಜೊತೆ ಸೇರಿ ಸೂಕ್ತ ಕ್ರಮಕ್ಕೆ ಮುಂದಾಗು ವದಾಗಿ ಡಿಎಫ್‍ಒ ಪ್ರಭಾಕರ್ ತಿಳಿಸಿದ್ದಾರೆ. ಶೀಘ್ರವೇ ಮೈಲತ್ಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವದಾಗಿ ಪ್ರಭಾಕರ್ ಭರವಸೆ ನೀಡಿದ್ದಾರೆ.

ಗ್ರಾಮದ ನೆಮ್ಮದಿ ಕೆಡಿಸಿರುವ ಈ ವಿವಾದವನ್ನು ತಕ್ಷಣವೇ ಬಗೆಹರಿಸುವಂತೆ ಮೈಲತ್ಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ಗೋಪಾಲ್ ಸೋಮಯ್ಯ