ಗುಡ್ಡೆಹೊಸೂರು, ನ. 7: ಇಲ್ಲಿಗೆ ಸಮೀಪದ ದೊಡ್ಡಬೆಟ್ಟಗೇರಿ ಗ್ರಾಮದಲ್ಲಿ ‘ಓಂ ಶಿಲ್ಪಾ ಕಲಾ ಕೇಂದ್ರ’ ಎಂಬ ನಾಮಫಲಕದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅನೀಶ್‍ಕುಮಾರ್ ಓ.ಎಸ್. ಎಂಬ ಕಲಾವಿದ ತಮ್ಮ ಕೈಯಿಂದ ವಿವಿಧ ರೀತಿಯ ಕಲಾಕೃತಿಗಳನ್ನು ಮೂಡಿಸುತ್ತಿದ್ದಾರೆ. ಇವರು ಕಲ್ಲಿನಿಂದ ಮತ್ತು ವಿವಿಧ ಜಾತಿಯ ಮರಗಳಿಂದ ವಿವಿಧ ಗೃಹಲಂಕಾರ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಅಲ್ಲದೆ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಲು ವಿವಿಧ ದೇವರ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಮುಖ್ಯ ಅಂಶವೆಂದರೆ ಇವರು ‘ಕೃಷ್ಣಶಿಲೆ’ಯಲ್ಲಿ ಮಾತ್ರ ವಿಗ್ರಹಗಳನ್ನು ಕೆತ್ತನೆ ಮಾಡುತ್ತಿದ್ದಾರೆ.
30 ವರ್ಷ ಪ್ರಾಯದ ಅನೀಶ್ ಪ್ರಾರಂಭದಲ್ಲಿ ಮರದಿಂದ ಮಾತ್ರ ವಿಗ್ರಹಗಳನ್ನು ಕೆತ್ತುತಿದ್ದರು. ನಂತರದ ದಿನಗಳಲ್ಲಿ ಕಲ್ಲಿನಿಂದ ವಿಗ್ರಹಗಳನ್ನು ಕೆತ್ತಲು ಪ್ರಾರಂಭಿಸಿದರು. ಇವರು ಮುಖ್ಯವಾಗಿ ಬಸವೇಶ್ವರ, ನಾಗದೇವರ ಮೂರ್ತಿ, ದುರ್ಗಾಪರಮೇಶ್ವರಿ, ಮಾರಿಯಮ್ಮ, ಚಾಮುಂಡೇಶ್ವರಿ ಮೂರ್ತಿಗಳನ್ನು ಕೆತ್ತನೆ ಮಾಡಿ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಲು ಸರಬರಾಜು ಮಾಡಿದ್ದಾರೆ.
ತಮ್ಮ 30ನೇ ವರ್ಷ ಪ್ರಾಯದಲ್ಲಿ ಶಿಲ್ಪಕಲೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಇವರು ಕಾರ್ಕಳದ ಸಿ.ಇ. ಕಾಮತ್ ಇನ್ಸ್‍ಟ್ಯೂಟ್ ಫಾರ್ ಆರ್ಟಿಸಿಯನ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ. ಇವರ ಗುರುಗಳು ನಾಗೇಶ್ ಆಚಾರ್ಯ ಮತ್ತು ಗುಣವಂತೇಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಇವರು ಚೆಟ್ಟಳ್ಳಿಯ ಕಂಡಕೆರೆ ನಿವಾಸಿಯಾಗಿದ್ದು, 2 ವರ್ಷಗಳಿಂದ ಬೆಟ್ಟಗೇರಿಯಲ್ಲಿ ತಮ್ಮ ಶಿಲ್ಪಕಲೆಯನ್ನು ಅರಳಿಸುತ್ತಿದ್ದಾರೆ. ಇವರಿಗೆ ಮುಂಗಡವಾಗಿ ಆದೇಶ ಮಾಡಿದರೆ ಯಾವ ದೇವರ ವಿಗ್ರಹಗಳನ್ನು ಬೇಕಾದರೂ ಅತಿಶೀಘ್ರದಲ್ಲಿಯೆ ನೀಡುತ್ತಾರೆ.
ಇವರು ತಯಾರಿಸಿದ ಕಲ್ಲಿನ ಮತ್ತು ಮರದ ವಿಗ್ರಹಗಳು ಕೊಡಗಿನ ವಿವಿಧ ಭಾಗಗಳಲ್ಲಿ ನೂತನ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರಮುಖವಾಗಿ ಕಲ್ಲೂರು, ಮಾದಪುರ, ತೊರೆನೂರು ಮುಂತಾದ ಕಡೆ ಪ್ರತಿಷ್ಠಾಪಿಸಲಾಗಿದೆ. ವಿವರಕ್ಕೆ ಮೊಬೈಲ್ ಸಂಖ್ಯೆ 9482733564ಯನ್ನು ಸಂಪರ್ಕಿಸಬಹುದು.