(ವಿಶೇಷ ವರದಿ : ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ನ. 7: ದ. ಕೊಡಗಿನ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾಫಿ ತೋಟ ಗುತ್ತಿಗೆ ಪಡೆಯುವ ಸಲುವಾಗಿ ನಡೆಸಿರುವ ಕಾಗದ ಪತ್ರಗಳಲ್ಲಿ ಮೇಲ್ನೋಟಕ್ಕೆ ಬಾರಿ ಮೊತ್ತದ ಹಣ ಪೋಲು ಮಾಡುವ ಮೂಲಕ ಸಂಘದ ಹಣವನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಆರೋಪ ಕೇಳಿ ಬಂದಿದೆ.

ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿರುವ ಸ್ಥಳೀಯರಾದ ಎಸ್.ಎಂ. ಧನಂಜಯ್ಯ ಅವರು ಈ ಬಗ್ಗೆ ಆರ್‍ಟಿಐ ಮೂಲಕ ದಾಖಲಾತಿಗಳನ್ನು ಪಡೆದಾಗ ಈ ಹಗರಣವು ಬೆಳಕಿಗೆ ಬಂದಿದೆ. ಇದರ ತನಿಖೆಗಾಗಿ ಧನಂಜಯ್‍ರವರು ತಾಲೂಕು ಮಟ್ಟದಿಂದ ರಾಜ್ಯ ಮಟ್ಟದ ಅಧಿಕಾರಿಗಳಿಗೂ, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳ ಸಚಿವಾಲಯಕ್ಕೂ ದೂರು ನೀಡಿ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.

1975ರಿಂದ ಸಂಘದ ಸ್ವಾದೀನದಲ್ಲಿರುವ 50 ಎಕರೆ ಸರ್ಕಾರಿ ಜಾಗದಲ್ಲಿ ಕಾಫಿ ತೋಟ ನಿರ್ವಹಣೆ ಮಾಡಲಾಗಿದೆ. 2014ಕ್ಕೆ ಈ ಕಾಫಿ ತೋಟದ ಜಾಗದ ಗುತ್ತಿಗೆ ಅವಧಿ ಮುಗಿದಿತ್ತು. 35 ವರ್ಷಕ್ಕೆ ಸೀಮಿತವಾಗಿ ಸಂಘ ಸಂಸ್ಥೆಗಳಿಗೆ ಸರ್ಕಾರಿ ಜಾಗವನ್ನು ನೀಡಲು ಅವಕಾಶವಿದೆ. ಅವಧಿ ಮುಗಿದ ನಂತರ ಸರ್ಕಾರಕ್ಕೆ ಈ ಜಾಗವನ್ನು ಒಪ್ಪಿಸಬೇಕು ಇದು ಸರ್ಕಾರಿ ನಿಯಮ ಆದರೆ ಬ್ಯಾಂಕಿನ ಆಡಳಿತ ಮಂಡಳಿ ಈ ಸರ್ಕಾರಿ ಜಾಗವನ್ನು ಸಂಪೂರ್ಣವಾಗಿ ತನ್ನ ವ್ಯಾಪ್ತಿಗೆ ಬಳಸಿಕೊಳ್ಳಲು ಮುಂದಾದ ಸಂದರ್ಭದಲ್ಲಿ ಇದಕ್ಕಾಗಿ ವಿವಿಧ ಹಂತಗಳಲ್ಲಿ ಹಣವನ್ನು ಖರ್ಚು ಮಾಡಿದ್ದರೆ ಖರ್ಚು ಮಾಡಿದ ಹಣಕ್ಕೆ 2016ರ ಜುಲೈ 15ರಂದು ನಡೆದ ಸಂಘದ ಆಡಳಿತ ಮಂಡಳಿ ಸಭೆಯ ನೋಟೀಸ್‍ನಲ್ಲಿ ಇದಕ್ಕಾಗಿ ಹಣ ಖರ್ಚು ಮಾಡಿರುವದನ್ನು ನಮೂದಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಪ್ರಭಾವಿ ನಾಯಕರ ಶಿಫಾರಸ್ಸಿನಂತೆ ಕಾಫಿ ತೋಟವನ್ನು 10 ವರ್ಷಕ್ಕೆ ಲೀಸ್ ಮುಂದುವರೆಸಲು ಕಂದಾಯ ಇಲಾಖೆ ಉನ್ನತ ಅಧಿಕಾರಿಗಳ ಮೂಲಕ ಶಿಪಾರಸ್ಸು ಮಾಡಿದ್ದರು.

ಈ ಹೋರಾಟದಿಂದ ಹಿಂದೆ ಸರಿಯುವಂತೆ ಪ್ರಭಾವಿಗಳು ಒತ್ತಡ ಹೇರಿದ್ದರೂ ಧನಂಜಯ್ ಇದಕ್ಕೆ ಮಣಿಯಲಿಲ್ಲ.ಇದರಿಂದ ಆಡಳಿತ ಮಂಡಳಿಯೂ ಧನಂಜಯ್‍ನ ಸದಸ್ಯ ಸ್ಥಾನ ರದ್ದು ಮಾಡುವಂತೆ 2019ರ ಸೆ.29ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನಿಸಿತು. ಉನ್ನತ ಮಟ್ಟದ ತನಿಖೆ ನಡೆಯಬೇಕು. ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು. ಈ ಕಾಫಿ ತೋಟವನ್ನು ಸ್ಥಳೀಯ ಕೂಲಿ ಕಾರ್ಮಿಕರಿಗೆ ಹಂಚಬೇಕು ಎಂದು ಧನಂಜಯ್ ಆಶಯ.

ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ರಹ್ಮಗಿರಿಪುರದ ಸರ್ವೆ ನಂ. 69/90ರಲ್ಲಿ 20.10 ಎಕರೆ,69/91ರಲ್ಲಿ 15.08 ಎಕರೆ, 69/92ರಲ್ಲಿ5.10 ಎಕರೆ ಕಾಫಿ ತೋಟವಿದ್ದು ಈ ಕಾಫಿ ತೋಟಕ್ಕೆ ‘ಸಹಕಾರ ಕಾಫಿ ತೋಟ’ ಎಂದು ನಾಮಕರಣ ಮಾಡಲಾಗಿದೆ. ತೋಟದಲ್ಲಿ ಕಾಫಿ, ಕಾಳುಮೆಣಸು, ಕಿತ್ತಳೆ, ಬೆಳೆಯಲಾಗಿದೆ. ಇದರಿಂದ ಬರುವ ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.25 ಹಂಚಿಕೆ ಮಾಡಲಾಗುತ್ತದೆ. ತೋಟ ಉತ್ತಮವಾಗಿ ನಿರ್ವಹಣೆ ಯಾಗುತ್ತಿದ್ದು ಉತ್ತಮ ಫಸಲು ನೀಡುತ್ತಿದೆ. ಶೇ.60ರಷ್ಟು ವ್ಯವಹಾರವನ್ನು ತೋಟದ ಆದಾಯ ದಿಂದಲೇ ಮಾಡಲಾಗುತ್ತಿದೆ.

ಸಹಕಾರ ಸಂಘದ ಕಾಫಿ ತೋಟದ ಗುತ್ತಿಗೆ ಅವಧಿ 2014ರ ಮಾರ್ಚ್ ತಿಂಗಳಿನಲ್ಲಿ ಮುಕ್ತಾಯ ಗೊಂಡಿತ್ತು. ಲೀಸ್‍ಅನ್ನು 10 ವರ್ಷಕ್ಕೆ ಮುಂದುವರೆಸಲು ಕೊಡಗು ಜಿಲ್ಲಾಧಿಕಾರಿ ಮೂಲಕ ಸರ್ಕಾರಿ ಆದೇಶ ಬಂದಿದೆ. (ಸಂಖ್ಯೆ ಆರ್‍ಡಿ 09 ಎಲ್‍ಜಿಒ 2015,ಬೆಂಗಳೂರು) 15.06.2016 ಪ್ರಕಾರ 4.03.2014 ರಿಂದ ಜಾರಿಗೆ ಬರುವಂತೆ ಕಾಫಿ ತೋಟದ ಗುತ್ತಿಗೆ ಬಗ್ಗೆ ವ್ಯವಹರಿಸಲು ಖರ್ಚಾಗಿರುವ ಮೊತ್ತ ರೂ. 14,19,600 ಹಾಗೂ ಉಳಿದ ಮೊತ್ತವನ್ನು ತೋಟದ ಅಭಿವೃದ್ಧಿ ನಿಧಿ (11 ಲಕ್ಷ) ಯಿಂದ ಖರ್ಚು ಮಾಡುವಂತೆ ತೀರ್ಮಾನಿಸಿದ್ದನ್ನು 2016ರ ಜುಲೈ 15ರ ಆಡಳಿತ ಮಂಡಳಿ ಸಭೆಯ ನಡಾವಳಿಯಲ್ಲಿ ದಾಖಲು ಮಾಡಲಾಗಿದೆ.