ಗೋಣಿಕೊಪ್ಪ, ನ. 7: ಫೇಸ್ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಊಹಾ ಪೋಹಗಳಿಗೆ ಕಿವಿ ಗೊಡದೆ ಎಲ್ಲಾ ಸಮುದಾಯದ ಬಾಂಧವರು ಪರಸ್ಪರ ಪ್ರೀತಿ ಬಾಂಧವ್ಯದಿಂದ ಇರಬೇಕೆಂದು ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಹೇಳಿದರು.
ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ವಿವಿಧ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಈದ್ಮಿಲಾದ್ ಕಾರ್ಯಕ್ರಮಗಳು, ಅಯೋಧ್ಯೆ ವಿಚಾರವಾಗಿ ಸುಪ್ರಿಂ ಕೋರ್ಟ್ನಿಂದ ಆದೇಶ ಹೊರ ಬೀಳಲಿದ್ದು, ಸಮಾಜ ಬಾಂಧವರು ಕೋಮು ಭಾವನೆಗಳಿಗೆ ದಕ್ಕೆಯಾಗಬಾರದು; ಪೊಲೀಸ್ ಇಲಾಖೆಯು ಸದಾ ಜನತೆಯ ಪರ ಇರುವದರಿಂದ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ ಮಾತನಾಡಿ, ಗೋಣಿಕೊಪ್ಪ ವೃತ್ತದಲ್ಲಿ ಬರುವ ತಿತಿಮತಿ, ಮಾಯಮುಡಿ, ಗೋಣಿಕೊಪ್ಪ ಯಡತೊರೆ, ಬೆಮ್ಮತ್ತಿ, ವ್ಯಾಪ್ತಿಯಲ್ಲಿನ ಅಲ್ಪ ಸಂಖ್ಯಾತರು ಈದ್ ಮಿಲಾದ್ ಕಾರ್ಯಕ್ರಮವನ್ನು ವಿವಿಧ ದಿನಾಂಕಗಳಲ್ಲಿ ಆಚರಿಸುವದು ನಡೆದುಕೊಂಡು ಬಂದಿರುವ ಪದ್ಧತಿ. ಈ ಬಗ್ಗೆ ಮೆರವಣಿಗೆ ಸಭೆಗಳಿಗೆ ಇಲಾಖೆಯಿಂದ ಅನುಮತಿ ಪಡೆದು ಕಾರ್ಯಕ್ರಮ ನಡೆಸುವಂತೆ ಕರೆ ನೀಡಿದರು.
ಬೆಮ್ಮತ್ತಿ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು ಮಾತನಾಡಿ ಈದ್ ಮಿಲಾದ್ ಕಾರ್ಯಕ್ರಮಗಳು ವಿವಿಧ ಭಾಗದಲ್ಲಿ ನಡೆಯಲಿದೆ. ಈ ಭಾಗದ ಎಲ್ಲ ಕೋಮಿನವರು ಉತ್ತಮ ಒಡನಾಟದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಇಂತಹ ಹಬ್ಬಗಳಲ್ಲಿ ಅನಾವಶ್ಯಕವಾಗಿ ಮೂಗು ತೂರಿಸಿ ನಮ್ಮಲ್ಲಿರುವ ಬಾಂಧವ್ಯಗಳನ್ನು ಹಾಳು ಮಾಡುವ ಯಾವದೇ ಕೋಮಿನವರಾದರೂ ಅವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಅಲ್ಪಸಂಖ್ಯಾತ ಮುಖಂಡ ಅಬ್ದುಲ್ ಸಮ್ಮದ್ ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜೆ.ಕೆ. ಸೋಮಣ್ಣ, ಸುರೇಶ್ ರೈ, ಮಂಜು, ಸಮೀರ್, ರಶೀದ್ ಮುಂತಾದವರು ಹಾಜರಿದ್ದರು.