ಸೋಮವಾರಪೇಟೆ, ನ. 6: ಉದ್ಯೋಗಿನಿ ಯೋಜನೆಯ ಸದ್ಬಳಕೆ ಯಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಇಲ್ಲಿನ ಸ್ತ್ರೀಶಕ್ತಿ ಭವನ ದಲ್ಲಿ ಆಯೋಜಿಸಿದ್ದ ಉದ್ಯೋಗಿನಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.

ಮಹಿಳೆಯರು ತಮ್ಮ ಕೌಶಲ್ಯ, ಅಭಿರುಚಿಗೆ ತಕ್ಕಂತೆ ತರಬೇತಿಯನ್ನು ಪಡೆದು ಉದ್ಯಮದಲ್ಲಿ ತೊಡಗಿಸಿ ಕೊಳ್ಳಬೇಕು. ಸರ್ಕಾರದ ಯೋಜನೆಯ ಸಹಾಯಧನ ಸದ್ಬಳಕೆ ಯಾಗಬೇಕು. ಆಧುನಿಕತೆಗೆ ತಕ್ಕಂತೆ ಉದ್ಯೋಗ ಕ್ಷೇತ್ರದಲ್ಲೂ ನಾವೀನ್ಯತೆ ಕಂಡುಕೊಳ್ಳಬೇಕು ಎಂದು ಕಿವಿಮಾತು ನುಡಿದರು. ಸತತ ಪರಿಶ್ರಮ ಮತ್ತು ಮಾಡುವ ಕೆಲಸದ ಮೇಲೆ ಪ್ರೀತಿ ಬೆಳೆಸಿಕೊಂಡರೆ ಮಾತ್ರ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಮಹಿಳೆಯರು ಪ್ರಥಮವಾಗಿ ತಮ್ಮ ಕುಟುಂಬದ ಬಜೆಟ್ ತಯಾರಿಸ ಬೇಕು. ಅದಕ್ಕೆ ತಕ್ಕಂತೆ ಖರ್ಚುವೆಚ್ಚ ಮಾಡಿದರೆ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಸಲಹೆ ನೀಡಿದರು. ಇಲಾಖೆಯ ನಿಗಮ ನಿರೀಕ್ಷಕಿ ಪ್ರಿಯಾ ಮಾತನಾಡಿ, ಉದ್ಯೋಗಿನಿ ಯೋಜನೆಯಡಿ ಸಾಮಾನ್ಯ ವರ್ಗಕ್ಕೆ ಶೇ. 30 ಹಾಗೂ ಪರಿಶಿಷ್ಟ ಜಾತಿ-ಪಂಗಡಕ್ಕೆ ಶೇ. 50 ಸಹಾಯಧನ ನೀಡಲಾಗುವದು ಎಂದರು.

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅಣ್ಣಯ್ಯ, ವಿಜಯಾ ಬ್ಯಾಂಕ್ ವ್ಯವಸ್ಥಾಪಕ ಅಶೋಕ್ ವಿಮನ್, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಶಿವರಾಜ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಬಾಬು ಜೋಸ್, ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷೆ ರೆಹನಾ ಸುಲ್ತಾನ, ತಾಲೂಕು ಕಾರ್ಯದರ್ಶಿ ಹೇಮಾ, ಇಲಾಖೆಯ ಮೇಲ್ವಿಚಾರಕಿ ನಿರ್ಮಲ ಸೇರಿದಂತೆ ಇತರರು ಉಪಸ್ಥಿತರಿದ್ದರು.