ಗೋಣಿಕೊಪ್ಪಲು, ನ. 7: ರೈತರು ಪ್ರಜ್ಞಾವಂತರಾಗುವ ಮೂಲಕ ಅನ್ಯಾಯವನ್ನು ಪ್ರಶ್ನೆ ಮಾಡಿ ಬೀದಿಗೆ ಇಳಿದು ಹೋರಾಟ ಮಾಡಬೇಕು ಆದರೆ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದರು.

ಬಿರುನಾಣಿಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ರೈತ ಸಂಘಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇವರು ರೈತ ಚಳವಳಿಯು ಸಿದ್ಧಾಂತದ ಮೇಲೆ ನಡೆಯುತ್ತಿದೆ. ಯಾವದೇ ರಾಜಕೀಯ ಪಕ್ಷಗಳಿಗೆ ವಾಲದೆ ಚುನಾವಣೆ ಸಂದರ್ಭದಲ್ಲಿ ರೈತ ಪರವಾಗಿ ನಿಲ್ಲುವ ಅಭ್ಯರ್ಥಿಗಳ ವ್ಯಕ್ತಿತ್ವವನ್ನು ಪರಿಗಣಿಸಿ ರೈತರು ಮತ ನೀಡುತ್ತಾರೆ. ರೈತ ಸಂಘದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಂಘ ಪ್ರಭಲವಾಗಿ ನೆಲೆ ನಿಂತಿದೆ. ಜಿಲ್ಲೆಯಲ್ಲಿಯೂ ಇತ್ತೀಚೆಗೆ ರೈತ ಸಂಘಕ್ಕೆ ಮತ್ತಷ್ಟು ಗಟ್ಟಿತನ ಬಂದಿದೆ. ರೈತರ ನ್ಯಾಯಯುತ ಬೇಡಿಕೆಗೆ ಹೋರಾಟ ನಡೆಯುತ್ತಿದೆ. ಹಲವಾರು ಪ್ರಕರಣಗಳಲ್ಲಿ ರೈತರಿಗೆ ಪರಿಹಾರ ಕೊಡಿಸುವಲ್ಲಿ ರೈತ ಸಂಘ ಯಶಸ್ವಿಯಾಗಿದೆ. ಹೆಚ್ಚು ಹೆಚ್ಚಾಗಿ ಸರ್ಕಾರದ ಸವಲತ್ತುಗಳು, ಪರಿಹಾರಗಳು ರೈತರಿಗೆ ತಲಪಬೇಕು. ಈ ನಿಟ್ಟಿನಲ್ಲಿ ಹೋಬಳಿವಾರು ರೈತರು ಒಗ್ಗಟ್ಟಾಗಿ ಸವಲತ್ತನ್ನು ಪಡೆಯಬೇಕು. ಅವಶ್ಯಕತೆ ಎದುರಾದಲ್ಲಿ ಉಗ್ರ ಹೋರಾಟಕ್ಕೂ ಕೈ ಜೋಡಿಸಬೇಕು ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ರೈತ ಸಂಘ ಆರಂಭವಾದ ದಿನದಿಂದಲೂ ಹಂತ ಹಂತವಾಗಿ ಹೋರಾಟ ನಡೆಸುವ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ರೈತ ಸಂಘ ಯಶಸ್ವಿಯಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಹೋರಾಟ ನಡೆಸಿದ ಹಿನ್ನೆಲೆ ಸರ್ಕಾರಗಳು ರೈತರಪರ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ನಡೆಸಿದೆ ಜಿಲ್ಲೆಯಲ್ಲಿಯೂ ರೈತ ಸಂಘಕ್ಕೆ ವಿಶಿಷ್ಟ ಗೌರವವಿದೆ. ರೈತ ಸಂಘದ ನೀತಿ ನಿಯಮಗಳನ್ನು ಅಳವಡಿಸಿಕೊಂಡು ರೈತ ಸಂಘಕ್ಕೆ ಚ್ಯುತಿ ಬಾರದಂತೆ ಸದಸ್ಯರು ಎಚ್ಚರ ವಹಿಸು ವಂತೆÀ ಕರೆ ನೀಡಿದರು. ರೈತ ಸಂಘದ ಮುಖಂಡರಾದ ಬಿರುನಾಣಿ ಭಾಗದ ಕರ್ತಮಾಡ ಸುಜು ಪೊನ್ನಪ್ಪ ಮಾತನಾಡಿ ಬಿರುನಾಣಿ, ತೆರಾಲು, ಪರಕಟಗೇರಿ, ಬಾಡಗರಕೇರಿ, ಈ ಭಾಗದಲ್ಲಿ ನೆಲೆಸಿರುವ ರೈತರಿಗೆ ನಿರಂತರ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ರೈತ ಸಂಘ ಅಧಿಕಾರಿಗಳ ಗಮನ ಸೆಳೆದು ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡಬೇಕು ಹಾಗೂ ಬಿಎಸ್‍ಎನ್‍ಎಲ್ ತೊಂದರೆಯಿಂದಾಗಿ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗಬೇಕು ಎಂದರು. ವಿದ್ಯುತ್ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಚೆಸ್ಕಾಂನ ಮೇಲಾಧಿಕಾರಿಯನ್ನು ಖುದ್ದು ಭೇಟಿ ನೀಡಿ ವಿದ್ಯುತ್ ಸಮಸ್ಯೆಗೆ ಪರಿಹಾರ, ಜಿಲ್ಲೆಯೆಲ್ಲೆಡೆ ಬಿಎಸ್‍ಎನ್‍ಎಲ್ ಸಮಸ್ಯೆ ಇರುವದರಿಂದ ಸಂಸದರ ಗಮನ ಸೆಳೆದು ಪರಿಹಾರಕ್ಕೆ ಪ್ರಯತ್ನ ಕಂಡುಕೊಳ್ಳುವ ತೀರ್ಮಾನಕ್ಕೆ ಬರಲಾಯಿತು. ಬಿರುನಾಣಿ, ತೆರಾಲು, ಪರಕಟಗೇರಿ, ಬಾಡಗರಕೇರಿ, ಈ ಭಾಗದಲ್ಲಿ ನೆಲೆಸಿರುವ ಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರೈತ ಸಂಘಕ್ಕೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ತಾಲೂಕು ಸಂಚಾಲಕ ಬಾಚಮಾಡ ಭವಿಕುಮಾರ್, ಶ್ರೀಮಂಗಲ ಹೋಬಳಿ ಸಂಚಾಲಕ ಕಂಬ ಕಾರ್ಯಪ್ಪ, ಹುದಿಕೇರಿ ಹೋಬಳಿ ಸಂಚಾಲಕ ಚಂಗುಲಂಡ ಸೂರಜ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಭಾಗದ ರೈತ ಮುಖಂಡರಾದ ಅಣ್ಣಳಮಾಡ ಗಿರೀಶ್, ಕಾಳಕಂಡ ಜೀತ್, ಕಾಳಿಮಾಡ ರಶಿಕ, ಕರ್ತಮಾಡ ನಂದ, ಮಲ್ಲೆಂಗಡ ಶಶಿ, ನೆಲ್ಲಿರ ಸೋಮಣ್ಣ, ಕರ್ತಮಾಡ ರಾಯ್, ಗುಡ್ಡಮಾಡ ಲೋಕೇಶ್,ಬೊಟ್ಟಂಗಡ ಮಹೇಶ್, ನೆಲ್ಲಿರ ಧನು, ಕುಪ್ಪಣಮಾಡ ಬೋಪಣ್ಣ, ಬೊಟ್ಟಂಗಡ ಹರಿಣಿಮಹೇಶ್, ಕಳಕಂಡ ಜೀತ್ ಕುಶಾಲಪ್ಪ, ಬೊಟ್ಟಂಗಡ ತಿಲಕ್, ಕುಪ್ಪಣಮಾಡ ಜೀವನ್, ಕಳಕಂಡ ಬಬ್ಲಿ ನಿತಿನ್, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು. ಚಂಗುಲಂಡ ಸೂರಜ್ ಸ್ವಾಗತಿಸಿ, ವಂದಿಸಿದರು. - ಹೆಚ್.ಕೆ. ಜಗದೀಶ್