ನಾಪೆÇೀಕ್ಲು, ನ. 7: ಪೇರೂರು ಗ್ರಾಮ ಇಗ್ಗುತ್ತಪ್ಪ ಬೆಟ್ಟ ವ್ಯಾಪ್ತಿಯಲ್ಲಿ ಭಯಾನಕ ನಿಗೂಢ ಶಬ್ಧ ಕೇಳಿಬರುತ್ತಿದೆ ಎಂಬದು ಸುಳ್ಳು ವದಂತಿ. ಇದನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಲಜಿ ಗ್ರಾಮಸ್ಥರ ಪರವಾಗಿ ಮುಕ್ಕಾಟಿರ ವಿನಯ್, ಮಾಳೆಯಂಡ ಅಯ್ಯಪ್ಪ ಮತ್ತಿತರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಪೇರೂರು ಶ್ರೀ ಇಗ್ಗುತ್ತಪ್ಪ ಬೆಟ್ಟದಲ್ಲಿ ಭಯಾನಕ ಶಬ್ಧ ಕೇಳಿ ಬರುತ್ತಿದೆ ಎಂದು ಕೆಲವರು ಸಾರ್ವಜನಿಕ ವಲಯದಲ್ಲಿ ಸುಳ್ಳು ವದಂತಿ ಹಬ್ಬಿಸುತ್ತಿದ್ದು, ನಾಗರಿಕರಲ್ಲಿ ಆತಂಕ ಮೂಡಿಸುತ್ತಿದ್ದಾರೆ ಎಂದು ದೂರಿದರು.
ಈ ಬಗ್ಗೆ ಟಿ.ವಿ ಮಾಧ್ಯಮಗಳಲ್ಲಿ ಇಲ್ಲ-ಸಲ್ಲದ ವಿಚಾರಗಳನ್ನು ಬಿಂಬಿಸಿ ಅವಹೇಳನಕಾರಿಯಾಗಿ ವೈಭವೀಕರಿಸಿ, ಬಿತ್ತ್ತರಿಸುವದು ವಿಷಾದನೀಯ ಹಾಗೂ ಖಂಡನೀಯವಾಗಿದೆ ಎಂದು ಹೇಳಿದರು. ಟಿ.ವಿ ಮಾಧ್ಯಮಗಳಲ್ಲಿ ಇಗ್ಗುತ್ತಪ್ಪ ಬೆಟ್ಟ ಅಪಾಯ ಸ್ಥಿತಿಯಲ್ಲಿದೆ, ಬೆಟ್ಟದಲ್ಲಿ ಬಿರುಕು ಉಂಟಾಗಿದೆ, ಶಬ್ಧ ಕೇಳಿಬರುತ್ತಿದೆ, ನಾಲ್ಕು ನಾಡು ವ್ಯಾಪ್ತಿಗೆ ಗಂಡಾಂತರ ಕಾದಿದೆ, ಬೆಟ್ಟದ ತಪ್ಪಲಿನಲ್ಲಿರುವವರನ್ನು ಸ್ಥಳಾಂತರಿಸಬೇಕು ಇದಕ್ಕೆಲ್ಲ ಶ್ರೀ ಇಗ್ಗುತ್ತಪ್ಪ ದೇವರ ಮುನಿಸು ಕಾರಣ. ದೇವರ ಆಚಾರ ವಿಚಾರ ಪಾವಿತ್ರ್ಯತೆಯಲ್ಲಿ ದೋಷ ಉಂಟಾಗಿರುವದು ಮತ್ತು ಬೆಟ್ಟದ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಮರಹನನ, ಹೋಂಸ್ಟೇ, ರೆಸಾರ್ಟ್ ಮುಂತಾದವುಗಳ ನಿರ್ಮಾಣವೇ ಕಾರಣ ಎಂದು ಬಿಂಬಿಸಿರುವದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.
ಶ್ರೀ ಇಗ್ಗುತ್ತಪ್ಪ ದೇವರ ಮಲ್ಮ ಬೆಟ್ಟವು ನೆಲಜಿ ಗ್ರಾಮ ವ್ಯಾಪ್ತಿಗೆ ಸೇರಿರುವದಾಗಿದ್ದು, ಇದು ಪೇರೂರು ಗ್ರಾಮದಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಪಾಡಿ, ನೆಲಜಿ ಹಾಗೂ ಪೇರೂರು ಗ್ರಾಮಸ್ಥರು ವರ್ಷಕ್ಕೆ 5 ಬಾರಿ ದೇವರ ಆದಿ ಸ್ಥಾನ ಮಲ್ಮ ಬೆಟ್ಟದಲ್ಲಿ ಪೂಜಾ ವಿಧಿವಿಧಾನಗಳನ್ನು ಚಾಚು ತಪ್ಪದೇ ಆಚರಿಸಿಕೊಂಡು ಬರುತ್ತಿದ್ದಾರೆ. ಆದಿ ಸ್ಥಾನದಲ್ಲಿ ಶುದ್ಧ ಮುದ್ರಿಕೆಗೆ ಆಗಲೀ, ಕಟ್ಟುಪಾಡಾಗಲೀ ಮುಂತಾದ ವಿಚಾರಗಳಿಗೆ ಧಕ್ಕೆ ಬಾರದಂತೆ ನಡೆದುಕೊಂಡು ಬರುತ್ತಿದ್ದೇವೆ. ಅದೂ ಅಲ್ಲದೆ ಇಗ್ಗುತ್ತಪ್ಪ ಬೆಟ್ಟ ವ್ಯಾಪ್ತಿಯಲ್ಲಿ ಯಾವದೇ ಗಣಿಗರಿಕೆ ಆಗಲಿ, ಮರಹನನ, ಹೋಂಸ್ಟೇ, ರೆಸಾರ್ಟ್ ನಿರ್ಮಾಣಕ್ಕೆ ಗ್ರಾಮಸ್ಥರು ಇದುವರೆಗೆ ಆಸ್ಪದ ನೀಡಿರುವದಿಲ್ಲ. ಸುಮಾರು 8 ವರ್ಷಗಳ ಹಿಂದೊಮ್ಮೆ ರೆಸಾರ್ಟ್ ನಿರ್ಮಾಣ ಮಾಡಲು ಹೊರ ರಾಜ್ಯದವರು ಆಗಮಿಸಿ ಪ್ರಯತ್ನಿಸಿದ ಸಂದರ್ಭದಲ್ಲಿ ಇಡೀ ನೆಲಜಿ ಗ್ರಾಮಸ್ಥರು “ಮಲ್ಮ ಚಲೋ” ಎಂಬ ಆಂದೋಲನವನ್ನು ಕೈಗೊಂಡು ಹೋರಾಟ ನಡೆಸಿ ತಡೆ ಹಿಡಿಯುವಲ್ಲಿ ಸಫಲರಾಗಿದ್ದೇವೆ. ವಾಸ್ತವಾಂಶ ಹೀಗಿರುವಾಗ ಬೆಂಗಳೂರಿನಲ್ಲಿ ಕುಳಿತು ಇಗ್ಗುತ್ತಪ್ಪ ಬೆಟ್ಟದ ಬಗ್ಗೆ ಸರಿಯಾದ ಅರಿವು ಇಲ್ಲದೆ ವಸ್ತು ಸ್ಥಿತಿಯನ್ನು ಬಿಟ್ಟು ಅಸಂಬದ್ಧ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಿರುವ ಟಿ.ವಿ. ಮಾಧ್ಯಮದವರ ಈ ನಡೆಯನ್ನು ಈ ಸಂದರ್ಭದಲ್ಲಿ ನಾವು ಖಂಡಿಸುತ್ತಿದ್ದೇವೆ ಎಂದರು.
ಈ ವರ್ಷ ನಿರಂತವಾಗಿ ಸುರಿದ ಗಾಳಿ ಮಳೆಯಿಂದಾಗಿ ಅಂತರ್ಜಲ ಮಟ್ಟ ಕುಗ್ಗದೇ ಇರುವ ಕಾರಣ ಜರಿ ತೊರೆಗಳಲ್ಲಿ, ಜಲಪಾತಗಳಲ್ಲಿ ನೀರಿನ ಹರಿವಿನ ರಭಸ ಅತಿಯಾಗಿರುವದು, ಮಟ್ಟನ್ನೂರು ವಿಮಾನ ನಿಲ್ದಾಣದಿಂದ ಮಂಗಳೂರು, ಮುಂಬೈ ಮಾರ್ಗವಾಗಿ ಪ್ರತಿ ದಿನ 5-6 ಬಾರಿ ವಿಮಾನ ಸಂಚಾರವಾಗುವ ಶಬ್ಧ ಈ ನಿಗೂಢ ಶಬ್ಧಕ್ಕೆ ಕಾರಣವಾಗಿರಬಹುದು. ಇದರ ಬಗ್ಗೆ ಈಗಾಗಲೇ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಸಂದರ್ಭದಲ್ಲೂ ಕೂಡ ಇದೇ ರೀತಿಯ ಸ್ಪಷ್ಟೀಕರಣವನ್ನು ನೀಡಿರುತ್ತಾರೆ ಎಂದ ಅವರು ಒಂದು ವೇಳೆ ಜಲಪ್ರಳಯವಾಗುವ ಮುನ್ಸೂಚನೆ ಇದ್ದಲ್ಲಿ ಪ್ರಾಣಿ, ಪಕ್ಷಿಗಳಿಗೆ ಇದರ ಮುನ್ಸೂಚನೆ ಬೇಗ ಗೊತ್ತಾಗಲಿದ್ದು, ಅವು ಮೊದಲೇ ಆ ಜಾಗ ಬಿಟ್ಟು ದೂರ ಸಾಗುತ್ತವೆ. ಅದರ ಬದಲಾಗಿ ಇಗ್ಗುತ್ತಪ್ಪ ಬೆಟ್ಟದ ಪೇರೂರು ಭಾಗದಲ್ಲಿ ಕಾಡಾನೆಗಳ ದಂಡೇ ಬೀಡು ಬಿಟ್ಟಿದೆ. ಈ ಎಲ್ಲಾ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು ನಾಗರಿಕರು ಈ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಯಾವದೇ ಆತಂಕಕ್ಕೆ ಒಳಗಾಗಬಾರದೆಂದು ಈ ಮೂಲಕ ತಿಳಿಯಪಡಿಸುತ್ತೇವೆ. ಸುಳ್ಳು ವದಂತಿ ಹಬ್ಬಿಸಿರುವವರ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಇಲಾಖೆ, ಜಿಲ್ಲಾಡಳಿv Àವನ್ನು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದರು.
ಗೋಷ್ಠಿಯಲ್ಲಿ ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೀಯಕಪೂವಂಡ ಅಪ್ಪಚ್ಚು, ಗ್ರಾಮಸ್ಥ ಬಾಳೆಯಡ ತಮ್ಮಯ್ಯ, ಪೇರೂರು ಗ್ರಾಮದ ಮೂವೆರ ವಿನು ಬಿದ್ದಪ್ಪ, ಮಚ್ಚುರ ಹರೀಶ್ ಇದ್ದರು.