ಮಡಿಕೇರಿ, ನ. 6: ಕಳೆದ 25 ವರ್ಷಗಳಿಗೂ ಅಧಿಕ ಸಮಯದಿಂದ ಕೊಡಗು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ ವಿರುದ್ಧ ಹಲವಷ್ಟು ಗುರುತರ ಆರೋಪಗಳೊಂದಿಗೆ; ಸೂಕ್ತ ಕಾನೂನು ಕ್ರಮಕ್ಕೆ ಕೋರಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ರಾಜ್ಯ ಸರಕಾರಕ್ಕೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಂದಾಯ ಸಚಿವರು ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಸೂಚನೆ ನೀಡಿರುವದಾಗಿ ತಿಳಿದುಬಂದಿದೆ.ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ್ದ ಪ್ರಾಕೃತಿಕ ವಿಕೋಪ ಸಂದರ್ಭ ಸರಕಾರದಿಂದ ತುರ್ತು ಕಾಮಗಾರಿಗಾಗಿ ಬಿಡುಗಡೆಗೊಂಡಿದ್ದ ಹಣದಲ್ಲಿ ರೂ. 21 ಕೋಟಿಯನ್ನು; ಜಿಲ್ಲಾಧಿಕಾರಿಗಳು ಜಿ.ಪಂ. ಇಂಜಿನಿಯರಿಂಗ್ ವಿಭಾಗಕ್ಕೆ ಬಿಡುಗಡೆ ಗೊಳಿಸಿ; ಈ ಹಣದಿಂದ ತುರ್ತು ಕಾರ್ಯಗಳನ್ನು ಕೈಗೊಳ್ಳುವದ ರೊಂದಿಗೆ ಪ್ರತ್ಯೇಕ ಹಣಕಾಸು ನಿರ್ವಹಣೆಗೆ ನಿರ್ದೇಶಿಸಿದ್ದರು.
ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಅಧಿಕಾರಿ ಶ್ರೀಕಂಠಯ್ಯ ಖಾಸಗಿ ಬ್ಯಾಂಕ್ನಲ್ಲಿ ಪ್ರತ್ಯೇಕ ಖಾತೆ ತೆಗೆದು; ಖಾಸಗಿಯಾಗಿ ಸರಕಾರದ ಅನುದಾನವನ್ನು ತಮ್ಮ ಅಧೀನದಲ್ಲಿ ಇರಿಸಿಕೊಂಡಿದ್ದಲ್ಲದೆ; ಹೊರ ಜಿಲ್ಲೆಯವರಾದ
(ಮೊದಲ ಪುಟದಿಂದ) ತಮ್ಮ ಸಂಬಂಧಿ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ; ಆ ಮುಖಾಂತರ ಹಣ ಪಾವತಿಸಿರುವ ಆರೋಪ ಕೇಳಿ ಬಂದಿತ್ತು.
ಜಿ.ಪಂ. ಸಭೆಯಲ್ಲಿ ಸದ್ದು : ಆ ಬೆನ್ನಲ್ಲೇ ಹಿಂದಿನ ಸಮ್ಮಿಶ್ರ ಸರಕಾರ ಪತನಗೊಂಡು; ಬಿಜೆಪಿ ಸರಕಾರ ರಚನೆಗೊಂಡ ಸಂದರ್ಭ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ವಿಚಾರ ಸದ್ದು ಮಾಡುವದರೊಂದಿಗೆ; ಖಾಸಗಿ ಬ್ಯಾಂಕ್ನಲ್ಲಿ ಹಣ ಹೂಡಿಕೆಯ ತನಿಖೆಗೆ ಆಗ್ರಹ ಕೇಳಿ ಬಂದಿತ್ತು. ಅಲ್ಲದೆ ಈ ಅಧಿಕಾರಿ ಕಾನೂನು ಬಾಹಿರವಾಗಿ ಸರಕಾರಿ ಹಣ ದುರ್ಬಳಕೆಯೊಂದಿಗೆ ಬೇಕಾಬಿಟ್ಟಿ ಕೆಲಸ ನಿರ್ವಹಣೆ ಕುರಿತು ಕಾನೂನು ಕ್ರಮ ಜರುಗಿಸಬೇಕೆಂದು ಜಿ.ಪಂ. ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಶಿವುಮಾದಪ್ಪ ಮೊದಲಾದವರು ಒತ್ತಾಯಿಸಿದ್ದರು.
ಕ್ರಮದ ಭರವಸೆ : ಆ ವೇಳೆ ಜಿ.ಪಂ. ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿಗಳು; ಸಂಬಂಧಿಸಿದ ಕುರಿತು ತನಿಖೆ ನಡೆಸಿ ಸರಕಾರದಿಂದ ಸೂಕ್ತ ಕಾನೂನು ಕ್ರಮಕ್ಕೆ ಕೋರುವದಾಗಿ ಭರವಸೆ ನೀಡಿದ್ದರು.
ತನಿಖೆಯಿಂದ ಸಾಬೀತು : ಅಂತೆಯೇ ಜಿ.ಪಂ. ಆರ್ಥಿಕ ವಿಭಾಗ ದಿಂದ ಮಾಹಿತಿ ಕಲೆಹಾಕಿ ದಾಗ; ಅಭಿಯಂತರ ಶ್ರೀಕಂಠಯ್ಯ, ಕೊಡಗು ಜಿ.ಪಂ.ನಲ್ಲಿ ಪ್ರಬಾರ ಕಾರ್ಯಪಾಲಕ ಅಭಿಯಂತರರಾಗಿ
ಕರ್ತವ್ಯದೊಂದಿಗೆ ಸಾಕಷ್ಟು ಅಧಿಕಾರ ದುರುಪಯೋಗ ಎಸಗಿರುವ ಅಂಶ ಬೆಳಕಿಗೆ ಬಂದಿದೆ.
ಮುಚ್ಚಿ ಹಾಕಲು ಯತ್ನ : ಇಂತಹ ಸನ್ನಿವೇಶದಲ್ಲಿ ಸಂಬಂಧಿಸಿದ ತನಿಖೆಯ ವರದಿಯನ್ನು ರಾಜ್ಯ ಸರಕಾರದಿಂದ ಸಂಬಂಧಿಸಿದ ಇಲಾಖೆಯ ಕಾರ್ಯದರ್ಶಿಗಳಿಗೆ ರವಾನಿಸುವಲ್ಲಿ ತುರ್ತು ಕ್ರಮ ಜರುಗಿಸದೆ ಪ್ರಭಾವಿ ಜನಪ್ರತಿನಿಧಿಗಳ ಒತ್ತಡದಿಂದ; ಪ್ರಮುಖ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿರುವ ಆರೋಪವಿದೆ.
ಹಣವೆಲ್ಲ ಖರ್ಚು : ಮಾತ್ರವಲ್ಲದೆ; ಖಾಸಗಿ ಬ್ಯಾಂಕ್ನಲ್ಲಿ ಆರ್ಥಿಕ ಇಲಾಖೆ ಅಥವಾ ಜಿಲ್ಲಾಡಳಿತದ ಲಿಖಿತ ಅನುಮತಿ ಪಡೆಯದೆ ಇರಿಸಲಾಗಿದ್ದ; ಹಣ ರೂ. 21 ಕೋಟಿಯಲ್ಲಿ ಬಹುತೇಕ ಖರ್ಚಾಗಿರುವದು ದೃಢಪಟ್ಟಿದೆ. ಈ ಹಣವನ್ನು ಬೇರೆ ಬೇರೆ ಕಾಮಗಾರಿ ಹೆಸರಿನಲ್ಲಿ ಗುತ್ತಿಗೆದಾರರಿಗೆ ಪಾವತಿಸಿದ್ದು; ಪ್ರಸಕ್ತ 20 ಕೋಟಿಗೂ ಅಧಿಕ ಮೊತ್ತ ಡ್ರಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ತಪ್ಪು ಮಾಹಿತಿ : ವಿಶ್ವಾಸನೀಯ ಮೂಲಗಳ ಪ್ರಕಾರ ಶ್ರೀಕಂಠಯ್ಯ ವಿರುದ್ಧ ಕ್ರಮ ಜರುಗಿಸುವಲ್ಲಿ ಸರಕಾರ ದ ಗಮನ ಸೆಳೆಯಲು ಜಿ.ಪಂ.ನ ಪ್ರಮುಖರು ಒತ್ತಡಕ್ಕೆ ಸಿಲುಕುರವದರೊಂದಿಗೆ ವಿಳಂಬ ಅನುಸರಿಸಿದ್ದರಿಂದ; ಖಾಸಗಿ ಬ್ಯಾಂಕಿನಲ್ಲಿ ಇರಿಸಿದ್ದ ಹಣವೆಲ್ಲ ಡ್ರಾ ಮಾಡಲು ಅವಕಾಶ ನೀಡಿದಂತಾ ಗಿದೆ ಎಂಬ ಆರೋಪವಿದೆ.
ಸಿಇಓ ಪ್ರತಿಕ್ರಿಯೆ: ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರು; ಪ್ರಕರಣ ಕುರಿತು ‘ಶಕ್ತಿ’ ಪ್ರತಿಕ್ರಿಯೆ ಬಯಸಿದಾಗ; ಖಾಸಗಿ ಬ್ಯಾಂಕ್ನಲ್ಲಿ ಹಣ ಹೂಡಿಕೆ ಮಾಡಿರುವದು ಮೇಲ್ನೋಟಕ್ಕೆ ನಿಯಮ ಬಾಹಿರ ವಾಗಿದ್ದರೂ; ಸಂಬಂಧಿಸಿದ ಹಣವನ್ನು ವಿವಿಧ ಕಾಮಗಾರಿಗೆ ಬಳಕೆ ಮಾಡಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಹಿಂದಿನ ಜಿ.ಪಂ. ಸಭೆ ನಿರ್ಣಯ ದಂತೆ ಇಲಾಖಾ ತನಿಖೆ ಕೈಗೊಂಡು; ಮುಂದಿನ ಕ್ರಮಕ್ಕಾಗಿ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾನೂನು ಉಲ್ಲಂಘನೆ : ಅಧಿಕಾರಿ ಶ್ರೀಕಂಠಯ್ಯ ಜಿ.ಪಂ.ನಲ್ಲಿ ಪ್ರಬಾರ ಹೊಣೆಗಾರಿಕೆ ವೇಳೆ ‘ಎ’ ದರ್ಜೆಯ ಗುತ್ತಿಗೆದಾರರಿಗೆ ನೀಡಬೇಕಿದ್ದ ಕೆಲಸವನ್ನು; ನಿಯಮ ಬಾಹಿರವಾಗಿ 2ನೇ ಶ್ರೇಣಿ, ಮೂರನೇ ಅಥವಾ 4ನೇ ಶ್ರೇಣಿ ಗುತ್ತಿಗೆದಾರರಿಗೆ ‘ಎ’ ದರ್ಜೆಯೆಂದು ಶಿಫಾರಸ್ಸುಗೊಳಿಸಿ ಕಾನೂನು ಉಲ್ಲಂಘಿಸಿರುವ ದೋಷಾರೋಪ ವಿದೆ.
ಪ್ರಸಕ್ತ ಈ ಎಲ್ಲಾ ಕಾರಣದಿಂದ ಈ ಅಧಿಕಾರಿ ವಿರುದ್ಧ ಕ್ರಮಕ್ಕೆ ಕೋರಲಾಗಿದ್ದು; ತಾ. 7 ರಂದು (ಇಂದು) ನಡೆಯಲಿರುವ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದ್ದು ಮಾಡುವ ನಿರೀಕ್ಷೆ ಇದೆ. ವಿಶೇಷವಾಗಿ ನೂತನವಾಗಿ ನಿರ್ಮಾಣಗೊಂಡು ಈಗಷ್ಟೇ ಉದ್ಘಾಟನೆಗೊಂಡಿರುವ ನೂತನ ಸಭಾಂಗಣದಲ್ಲಿ; ಸ್ವತಃ ಜಿ.ಪಂ. ಇಂಜಿನಿಯರ್ ವಿರುದ್ಧ ಅಧಿಕಾರ ದುರುಪಯೋಗದ ಆರೋಪ ವ್ಯಕ್ತ ಗೊಳ್ಳುತ್ತಿರುವದು ಸಾಕಷ್ಟು ಅಚ್ಚರಿಗೆ ದಾರಿ ಮಾಡಿಕೊಟ್ಟಂತಾಗಿದೆ.