ಸಿದ್ದಾಪುರ, ನ. 6: ಜಿಲ್ಲೆಯಲ್ಲಿ ನೆಲೆಸಿದ್ದ ಯುವಕನೋರ್ವ ಅವಘಡವಾದ ರೀತಿಯಲ್ಲಿ ದ.ಕ. ಜಿಲ್ಲೆಯ ವಿಟ್ಲದಲ್ಲಿ ದುರ್ಮರಣ ಹೊಂದಿದ್ದು; ಇದೊಂದು ಪೂರ್ವ ಯೋಜಿತ ಕೊಲೆ ಎಂದು ಮೃತನ ತಂದೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸ್ ಮೊಕದ್ದಮೆ ದಾಖಲಾಗಿದೆ. ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮದ ನಿವಾಸಿ, ಸುನಿಲ್‍ಕುಮಾರ್ (27) ಎಂಬಾತನೇ ಮೃತ ಯುವಕ.ಮೂಲತಃ ದ.ಕ. ಜಿಲ್ಲೆಯ ವಿಟ್ಲ ತಾಲೂಕಿನ ನೆಲ್ಲಿಗುಡ್ಡೆ, ತೊಕ್ಕೊಟ್ಟು ನಿವಾಸಿ ಅಣ್ಣು ಹಾಗೂ ಪ್ರೇಮ ಹಲವಾರು ವರ್ಷಗಳಿಂದ ಅಭ್ಯತ್‍ಮಂಗಲ ಗ್ರಾಮದ ಪೈಸಾರಿಯಲ್ಲಿ ನೆಲೆಸಿದ್ದರು. ಇವರ ದ್ವಿತೀಯ ಪುತ್ರ ಸುನಿಲ್‍ಕುಮಾರ್ ಆಗಾಗ್ಗೆ ತನ್ನ ಊರಿಗೆ ಹೋಗಿ ಬರುತ್ತಿದ್ದ. ಈ ನಡುವೆ ಅಲ್ಲಿನ ಯುವತಿಯೊಂದಿಗೆ ಪ್ರೇಮಾಂಕುರ ಕೂಡ ಆಗಿತ್ತು. ಈ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ ಒಂದಿಷ್ಟು ವಿರೋಧ ವ್ಯಕ್ತಗೊಂಡಿತ್ತು. ಮೊನ್ನೆ ದಿನ ತನ್ನ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ಸುನಿಲ್ ನಿನ್ನೆಯಿಂದ ನಾಪತ್ತೆಯಾಗಿದ್ದ. ಇಂದು ಆತನ ಮೃತದೇಹ ತೊಕ್ಕೊಟ್ಟುವಿನ ತೋಡಿನೊಳಗೆ ಪತ್ತೆಯಾಗಿದೆ. ಮೃತದೇಹದ ಮೇಲೆ ಆತನ ದ್ವಿಚಕ್ರ ವಾಹನ ಬಿದ್ದಿದ್ದುದು ಕಂಡು ಬಂದಿದೆ. ತಲೆಗೆ ಗಂಭೀರ ಗಾಯವಾಗಿದ್ದು, ಕಣ್ಣುಗುಡ್ಡೆಗಳು ಹೊರಬಂದಿವೆ. ಆತನ ಹೆಲ್ಮೆಟ್ ವಾಹನದ ಬಳಿ ಬಿದ್ದಿತ್ತು.

ಕೊಲೆ ಶಂಕೆ

ಮೃತದೇಹವನ್ನು ಗಮನಿಸಿದ ಸುನಿಲ್ ಪೋಷಕರು, ಸಂಬಂಧಿಕರು ಇದೊಂದು ಪೂರ್ವಯೋಜಿತ ಕೊಲೆಯಾಗಿದೆ. ಸುನಿಲ್ ಹೆಲ್ಮೆಟ್ ಧರಿಸಿದ್ದರೂ ತಲೆಗೆ ಪೆಟ್ಟಾಗಲು ಸಾಧ್ಯವಿಲ್ಲ; ಹೆಲ್ಮೆಟ್‍ಗೂ ಜಖಂ ಆಗಿಲ್ಲ. ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ತೋಡಿಗೆ ಎಸೆದು ವಾಹನವನ್ನು ಆತನ ಮೇಲೆ ಎಸೆಯಲಾಗಿದೆ. ತೋಡಿನ ಮೋರಿಗೆ ವಾಹನ ಡಿಕ್ಕಿಯಾದ ರೀತಿಯಲ್ಲಿ ಬಿಂಬಿಸಲಾಗಿದೆ. ಆದರೆ ವಾಹನಕ್ಕೂ ಜಖಂ ಆಗಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಸುನಿಲ್ ತಂದೆ ಪೊಲೀಸ್ ದೂರು ನೀಡಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಕೊಲೆ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

- ಅಂಚೆಮನೆ ಸುಧಿ