ಮಡಿಕೇರಿ, ನ. 7: ಜಿಲ್ಲೆಯ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಎನ್.ಜಿ. ನವೀನ್ ಆಯ್ಕೆಯಾಗಿದ್ದಾರೆ. ನಗರದ ಬಾಲಭವನದಲ್ಲಿ ತಾ. 3 ರಂದು ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯ ಹೊರಗುತ್ತಿಗೆ ನೌಕರರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಜಿಲ್ಲಾಧ್ಯಕ್ಷರಾಗಿ ಎನ್.ಜಿ. ನವೀನ್, ಉಪಾಧ್ಯಕ್ಷರಾಗಿ ಸಿ.ಎಂ. ಮನೋಜ್, ಗೌರವಾಧ್ಯಕ್ಷರಾಗಿ ಮಮತಾ, ಖಜಾಂಚಿಯಾಗಿ ಭವ್ಯ, ಕಾರ್ಯದರ್ಶಿಗಳಾಗಿ ಬಿ.ಬಿ. ಶಿವಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಸಿ. ರಂಜಿತ್ ಸದಸ್ಯರಾಗಿ ಉಮೇಶ್, ಇಂದಿರಾ, ನಿರ್ಮಲ, ಯಶೋಧ, ಪಾಲಾಕ್ಷ, ಗಣೇಶ್ ಕಾಮತ್ ಇತರರನ್ನು ಆಯ್ಕೆ ಮಾಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ಪ್ರಾಂತ್ಯದ ಸಂಚಾಲಕ ಜಿ.ರಮೇಶ್, ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ರಾಜ್ಯಾಧ್ಯಕ್ಷ ಡಾ. ಕೆ.ಎಸ್. ಶರ್ಮಾ ಅವರ ಸಾರಥ್ಯದಲ್ಲಿ ರಾಜ್ಯಾದ್ಯಂತ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರನ್ನು ಖಾಯಂ ನೌಕರರೆಂದು ವಿಲೀನ ಮಾಡಲು ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಪ್ರತಿಯೊಬ್ಬರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು. ಮೈಸೂರು ಜಿಲ್ಲಾ ಹೊರಗುತ್ತಿಗೆ ಚಾಲಕರ ಸಂಘಟನೆ ಅಧ್ಯಕ್ಷ ಗಂಗಾಧರ ಮಾತನಾಡಿ, ಈಗಾಗಲೇ ಹೊರಗುತ್ತಿಗೆ ನೌಕರರು ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರಗಳಲ್ಲಿ ಮಹಾಮಂಡಲದ ಆಶ್ರಯದಲ್ಲಿ ಸಂಘಟಿತರಾಗಿದ್ದಾರೆ. ಕೊಡಗು ಜಿಲ್ಲೆಯ ಹೊರಗುತ್ತಿಗೆ ನೌಕರರೂ ಮಹಾಮಂಡಲದ ಮುಖ್ಯ ವಾಹಿನಿಗೆ ಬಂದಿರುವದು ಸಂತಸವನ್ನು ತಂದಿದೆ ಎಂದರು.
ಸಭೆಯಲ್ಲಿ ದಿನಗೂಲಿ ನೌಕರರ ಸಂಘದ ಜಿಲ್ಲೆ ಅಧ್ಯಕ್ಷ ಜಗದೀಶ್, ಮಹಾಮಂಡಲದ ಹಾಸನ ಜಿಲ್ಲೆಯ ಅಧ್ಯಕ್ಷ ರಂಗೇಗೌಡ, ಚಾಮರಾಜ ನಗರದ ಜಿಲ್ಲಾ ಘಟಕದ ಕಾರ್ಯದರ್ಶಿ ರಾಜಣ್ಣ, ಮೈಸೂರು ಜಿಲ್ಲಾ ಹೊರಗುತ್ತಿಗೆ ಚಾಲಕರ ಸಂಘದ ಉಪಾಧ್ಯಕ್ಷ ಮೊಹಿಸಿನ್ ಪಾಷಾ, ಖಜಾಂಚಿ ಜೆ. ಪ್ರಕಾಶ್, ಸಂಘಟನಾ ಕಾರ್ಯದರ್ಶಿಗಳಾದ ರಘು ಹಾಗೂ ಮುರುಗನ್ ಉಪಸ್ಥಿತರಿದ್ದರು.