ಕೂಡಿಗೆ, ನ. 7: ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಮಿನಿ ವಿಮಾನ ನಿಲ್ದಾಣವನ್ನು ಪ್ರಾರಂಭಿಸುವ ಸರ್ಕಾರದ ಚಿಂತನೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಮಿನಿ ವಿಮಾನ ನಿಲ್ದಾಣವನ್ನು ಪ್ರಾರಂಭಿಸಲಾಗಿದೆ. ಇನ್ನು ಉಳಿದಿರುವ ಕೆಲವು ಜಿಲ್ಲೆಗಳಲ್ಲಿ ಕೊಡಗು ಜಿಲ್ಲೆಯೂ ಸೇರಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದಲೂ ಮಿನಿ ವಿಮಾನ ನಿಲ್ದಾಣಕ್ಕೆ ಸೂಕ್ತ ಜಾಗಗಳನ್ನು ಪರಿಶೀಲಿಸಲಾಗುತ್ತಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಬ್ಯಾಡಗೊಟ್ಟ, ತೊರೆನೂರು ಗ್ರಾ.ಪಂನ ಅಳುವಾರ, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಬಸವನತ್ತೂರು ಗ್ರಾಮದ (ಕೂಡಿಗೆ) ಕೃಷಿ ಇಲಾಖೆಗೆ ಸೇರಿದ ಜಾಗಗಳನ್ನು ಮಿನಿ ವಿಮಾನ ನಿಲ್ದಾಣಕ್ಕೆ ಸೂಕ್ತ ಜಾಗಗಳೆಂದು ಗುರುತಿಸಲಾಗಿತ್ತು. ಈ ನಾಲ್ಕು ಜಾಗಗಳಲ್ಲಿ ಕೂಡಿಗೆಯ ಕೃಷಿ ಇಲಾಖೆಯ ಜಾಗವು ಸೂಕ್ತ ಎನಿಸಿದ್ದು, ಇನ್ನುಳಿದ ಮೂರು ಸ್ಥಳಗಳಿಗೆ ದೆಹಲಿ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದ ಸಮಸ್ಯೆಗಳ ಬಗ್ಗೆ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಮಾಹಿತಿ ನೀಡಿದ್ದರು.
ಕೃಷಿ ಇಲಾಖೆಗೆ ಸೇರಿದಂತೆ ಪೈಸಾರಿ ಜಾಗ, ಕಂದಾಯ ಇಲಾಖೆಯ ಜಾಗ ಹಾಗೂ ತೋಟಗಾರಿಕಾ ಇಲಾಖೆಯ ಸಮೀಪವಿರುವ ಜರ್ಸಿ ತಳಿ ಸಂವರ್ಧನ ಕೇಂದ್ರದ ಜಾಗವು ಸೇರಿ ಒಟ್ಟು 150ಕ್ಕು ಹೆಚ್ಚು ಎಕರೆ ವಿಸ್ತೀರ್ಣವಾಗಿದ್ದು, ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತವಾಗಿದೆ. ಇದರ ಜೊತೆಯಲ್ಲಿ ವಿಮಾನ ಚಾಲಕರ ತರಬೇತಿ ಕೇಂದ್ರ ಸ್ಥಾಪಿಸಲು ಚಿಂತಿಸಲಾಗಿದ್ದು, ಸದರಿ ಸೂಕ್ತ ಸ್ಥಳವನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಈಗಾಗಲೇ ಪರಿಶೀಲಿಸಿದ್ದಾರೆ. ನಂತರ ಸರ್ವೆ ಇಲಾಖೆಯಿಂದ ಈ ಸ್ಥಳವನ್ನು ಸಮರ್ಪಕವಾಗಿ ಸರ್ವೆ ನಡೆಸಿ ವರದಿ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವರದಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದ ಕೇಂದ್ರದ ಅಧಿಕಾರಿಗಳಿಗೆ ತಿಳಿಸಲಾಗುವದು ಮತ್ತೊಮ್ಮೆ ಸ್ಥಳ ಪರಿಶೀಲಿಸಿ ಸದ್ಯದಲ್ಲೆ ಕಾಮಗಾರಿಯನ್ನು ಪ್ರಾರಂಭಿಸಲು ಚಿಂತನೆ ನಡೆದಿದೆ.
ಈ ವಿಷಯವಾಗಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರನ್ನು ಸಂಪರ್ಕಿಸಿದ ಸಂದರ್ಭ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣವನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗಿದೆ. ಸರ್ಕಾರದ ಅನುಮೋದನೆ ದೊರೆತರೂ ವಿಮಾನ ನಿಲ್ದಾಣದ ಕೇಂದ್ರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪ್ರಮಾಣಿಕೃತ ಹಾಗೂ ಕೆಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದು, ಇವುಗಳನ್ನು ಇದೀಗ ಅಧಿಕಾರಿಗಳ ಮಟ್ಟದಲ್ಲಿ ಪರಿಶೀಲಿಸಲಾಗಿದೆ. ಕೂಡಿಗೆಯ ಕೃಷಿ ಕ್ಷೇತ್ರದ ಜಾಗದ ಕೆಲವು ಜಾಗಗಳನ್ನು ಸೈನಿಕ ಶಾಲೆಗೆ ನೀಡಲಾಗಿದೆ. ಇನ್ನುಳಿದ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ಮತ್ತು ತರಬೇತಿ ಕೇಂದ್ರ ಪ್ರಾರಂಭಿಸಲು ಅನುಕೂಲವಾಗಿರುವದರಿಂದ ಮುಂದಿನ ಬಜೆಟ್ನಲ್ಲಿ ಈ ವಿಷಯವನ್ನು ಪ್ರಸ್ತಾವಿಸಿ ಹೆಚ್ಚು ಹಣವನ್ನು ಕಾದಿಸಿರಿ ಕ್ರಿಯಾಯೋಜನೆಯನ್ನು ತಯಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯ ಮಾಡಲಾಗುವದು. ಜೊತೆಗೆ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮತ್ತು ಜಿಲ್ಲೆಯಿಂದ ರಾಜಧಾನಿಗೆ ತೆರಳುವ ಜಿಲ್ಲೆಯ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲು ಈ ಸಾಲಿನಿಂದಲೇ ಪ್ರಯತ್ನಿಸಲಾಗುವದು ಎಂದು ತಿಳಿಸಿದರು.