ವಿಚಿತ್ರ ಶಬ್ಧ: ಬೆಚ್ಚಿ ಬಿದ್ದ ಪೇರೂರಿನ ಜನ....!
ನಾಪೋಕು, ನ. ೫: ಪೇರೂರಿನ ಇಗ್ಗುತ್ತಪ್ಪ ಬೆಟ್ಟದಲ್ಲಿ ನಿಗೂಢ ಶಬ್ಧ ಕೇಳಿ ಬರುತ್ತಿದೆ. ಕಳೆದ ರಾತ್ರಿ ಭೂಮಿಯೊಳಗಿನಿಂದ ನದಿಯಲ್ಲಿ ನೀರು ಹರಿಯುತ್ತಿರುವ ಶಬ್ಧ ಕೇಳುತ್ತಿದ್ದು, ಈ ಶಬ್ಧಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ.
ಮಡಿಕೇರಿ ತಾಲೂಕಿನ ಪೇರೂರಿನಲ್ಲಿರುವ ಕೊಡಗಿನ ಕುಲದೇವರು ಇಗ್ಗುತ್ತಪ್ಪ ಬೆಟ್ಟದಲ್ಲಿ ಈ ಶಬ್ಧ ಕೇಳಿ ಬರುತ್ತಿದೆ. ಭಾರೀ ಪ್ರಮಾಣದ ಈ ಬೆಟ್ಟದ ತಪ್ಪಲಿನಲ್ಲಿ ಸುಮಾರು ೨೦ ಕುಟುಂಬಗಳಿದ್ದು, ಆಕಸ್ಮಾತ್ ಜಲಸ್ಫೋಟವಾಗಿ ಬೆಟ್ಟ ಕುಸಿದಲ್ಲಿ ಭಾರೀ ಅನಾಹುತ ಸಂಭವಿಸಲಿದೆ.
ಹೀಗಾಗಿ ಏನಾಗುವದೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಕಳೆದ ಹಲವು ದಿನಗ ಳಿಂದಲೂ ಈ ವಿಚಿತ್ರ ಶಬ್ಧ ಕೇಳಿ ಬರುತ್ತಿದ್ದು, ಮೂರು ದಿನಗಳಿಂದ ಆ ಶಬ್ಧ ಮತ್ತಷ್ಟು ಜೋರಾಗಿದೆ. ಅಯ್ಯಂಗೇರಿಯಲ್ಲೂ ಒಂದು ವಾರದ ಹಿಂದೆಯಷ್ಟೇ ನಿಗೂಢ ಶಬ್ಧ ಕೇಳಿ ಬಂದಿತ್ತು ಎನ್ನಲಾಗಿದ್ದು, ಆಗಸ್ಟ್ ತಿಂಗಳಲ್ಲಿ ಮಳೆ ಸುರಿದಾಗ ಈ ಇಗ್ಗುತ್ತಪ್ಪ ದೇವಾಲಯದ ಸಮೀಪದಲ್ಲಿ ಬೆಟ್ಟ ಕುಸಿದಿತ್ತು. ಇದೀಗ ಭೂಮಿ ಯೊಳಗೆ ನದಿಯಲ್ಲಿ ನೀರು ಹರಿಯುತ್ತಿರುವ ಶಬ್ಧ ಕೇಳುತ್ತಿರುವ ದರಿಂದ ಅನಾಹುತ ಸಂಭವಿಸುವದೇ ಎಂಬ ಆತಂಕ ಸ್ಥಳೀಯ ಜನರಲ್ಲಿ ಕಾಡತೊಡಗಿದೆ.
೨೦೧೮ ರಲ್ಲೂ ಮಡಿಕೇರಿ ಸುತ್ತ ಮುತ್ತಲಿನ ವ್ಯಾಪ್ತಿಯಲ್ಲಿ ಆದಂತಹ ಭೂಕುಸಿತಕ್ಕೂ ಮೊದಲು ಇದೇ ರೀತಿಯ ಶಬ್ಧ ಕೇಳಿ ಬಂದಿತ್ತು ಎನ್ನಲಾಗಿದ್ದು, ಬಳಿಕ ೭ ಗ್ರಾ.ಪಂ. ವ್ಯಾಪ್ತಿಯ ೩೭ ಗ್ರಾಮಗಳಲ್ಲಿ ಜಲಸ್ಫೋಟ ಸಂಭವಿಸಿತ್ತು. ಕಳೆದ ರಾತ್ರಿಯೇ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಭೇಟಿ ನೀಡz ಅಧಿಕಾರಿಗಳ ವಿರುದ್ಧ ಸ್ಥಳೀಯರಾದ ಕುಮಾರ, ತಮ್ಮಯ್ಯ, ನಂದಾ ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. -ದುಗ್ಗಳ ಸದಾನಂದ